ಬೆಳಗಾವಿ: ನಿನ್ನೆ ರಾತ್ರಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನ ಹೊಂದಿದ ರಾಜ್ಯ ವಿಧಾನಸಭೆ ಉಪಾಧ್ಯಕ್ಷ ಆನಂದ ಮಾಮನಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಬೆಳಗಾವಿಯ ಸವದತ್ತಿ ಪಟ್ಟಣದ ರಾಮಾಪುರ ಸೈಟ್ನಲ್ಲಿರುವ ಕ್ರೀಡಾಂಗಣದಲ್ಲಿ ಸಕಲ ವ್ಯವಸ್ಥೆ ಮಾಡಲಾಗಿದ್ದು, ಸಾವಿರಾರು ಮಂದಿ ಆಗಮಿಸುತ್ತಿದ್ದಾರೆ.
ಇದಕ್ಕೂ ಮುನ್ನ ಬೆಂಗಳೂರಿನಿಂದ ಆ್ಯಂಬುಲೆನ್ಸ್ನಲ್ಲಿ ಕರೆತಂದ ಪಾರ್ಥಿವ ಶರೀರಕ್ಕೆ ಅವರ ಸವದತ್ತಿಯ ನಿವಾಸದಲ್ಲಿ ಕುಟುಂಬಸ್ಥರು ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು. ಮಾಮನಿ ಮೊದಲ ಪತ್ನಿ ರೇಖಾ, ಎರಡನೇ ಪತ್ನಿ ರತ್ನಾ, ಮಕ್ಕಳು ಹಾಗೂ ಕುಟುಂಬಸ್ಥರು ಇದ್ದರು. ಈ ಸಂದರ್ಭದಲ್ಲಿ ಕಣ್ಣೀರಿಡುತ್ತಾ ಇಬ್ಬರು ಪತ್ನಿಯರು ಮನೆಯೊಳಗೆ ತೆರಳಿದ ದೃಶ್ಯ ಕಂಡುಬಂತು.
ಮುನವಳ್ಳಿ ಸೋಮಶೇಖರ ಮಠದ ಮುರುಘೇಂದ್ರ, ಬೆಡಸೂರ ಮಠದ ಅಜ್ಜಯ್ಯ ಸ್ವಾಮೀಜಿ ಆಗಮಿಸಿದ್ದರು. ಬಳಿಕ ತಾಲೂಕು ಕ್ರೀಡಾಂಗಣದಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕಿಡಲಾಯಿತು.
ಇದನ್ನೂ ಓದಿ: ಮಾಮನಿ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಲಿರುವ ಸಿಎಂ, ಮಾಜಿ ಸಿಎಂ
ಸಾರ್ವಜನಿಕರು, ಅಭಿಮಾನಿಗಳು ಸರತಿ ಸಾಲಿನಲ್ಲಿ ನಿಂತು ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದಾರೆ. ಮಧ್ಯಾಹ್ನ 3 ಗಂಟೆಯವರೆಗೂ ಅವಕಾಶ ನೀಡಲಾಗಿದೆ. ಸ್ಥಳದಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಅಂತಿಮ ದರ್ಶನದ ಬಳಿಕ ಯಂಡ್ರಾವಿಯ ಚಂದ್ರಮಾ ಫಾರ್ಮಹೌಸ್ನಲ್ಲಿ ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವ ಗೋವಿಂದ ಕಾರಜೋಳ ಸೇರಿ ಹಲವು ಬಿಜೆಪಿ ನಾಯಕರು ಭಾಗಿಯಾಗಲಿದ್ದಾರೆ. ಈಗಾಗಲೇ, ಇಂದು ಆರಂಭವಾಗಬೇಕಿದ್ದ ಕಿತ್ತೂರು ಉತ್ಸವವನ್ನು ನಾಳೆಗೆ ಮುಂದೂಡಲಾಗಿದೆ. ಬಿಜೆಪಿ ಜನ ಸಂಕಲ್ಪ ಯಾತ್ರೆಯೂ ಸಹ ಮುಂದೂಡಲ್ಪಟ್ಟಿದೆ.