ಬೈಲಹೊಂಗಲ: ಕೃಷಿ ಇಲಾಖೆ ವತಿಯಿಂದ ರೈತರಿಗೆ ಪೂರೈಕೆ ಮಾಡಲಾದ ಸೋಯಾಬಿನ್ ಬೀಜ ಕಳಪೆ ಗುಣಮಟ್ಟದಿಂದ ಕೂಡಿದೆ. ಹೊಸ ಬೀಜ ವಿತರಿಸಿ ಬಿತ್ತನೆಗೆ ಮಾಡಿದ ವೆಚ್ಚವನ್ನು ಪರಿಹಾರ ರೂಪದಲ್ಲಿ ನೀಡುವಂತೆ ಆಗ್ರಹಿಸಿ ನಾಗನೂರ ಗ್ರಾಮದಲ್ಲಿ ರೈತರು ಪ್ರತಿಭಟನೆ ನಡೆಸಿದರು.
ಬೈಲಹೊಂಗಲ ತಾಲೂಕಿನ ನಾಗನೂರ ಗ್ರಾಮದಲ್ಲಿ ಪ್ರತಿಭಟನೆ ನಡೆಸಿದ ರೈತರು ಕೃಷಿ ಅಧಿಕಾರಿಗಳು ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಪ್ರತಿಭಟನೆಯ ವಿಷಯ ತಿಳಿದು ಗ್ರಾಮಕ್ಕೆ ಭೇಟಿ ನೀಡಿದ ಬೆಳಗಾವಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಲಾನಿ ಮೊಕಾಶಿ, ಕೃಷಿ ಇಲಾಖೆ ಉಪನಿರ್ದೇಶಕ ಹೆಚ್.ಡಿ.ಕೋಳೆಕರ್ ಅವರಿಗೆ ರೈತರು ಮುತ್ತಿಗೆ ಹಾಕಿ ತಮ್ಮ ಆಕ್ರೋಶ ಹೊರ ಹಾಕಿದರು.
ನಾಗನೂರು ಪಿಕೆಪಿಎಸ್ ಮೂಲಕ ರೈತರಿಗೆ ವಿತರಿಸಿದ್ದ ಸೋಯಾಬಿನ್ ಬೀಜಗಳನ್ನು ಬಿತ್ತನೆ ಮಾಡಿ ಹತ್ತು ದಿನವಾದರೂ ಮೊಳಕೆ ಬಂದಿಲ್ಲ. ಹೊಲದಲ್ಲಿ ನಾಟಿ ಮಾಡಲಾದ ಬೀಜ ಕಳಪೆಯಿಂದ ಕೂಡಿದೆ. ಇದರಿಂದ ರೈತರಿಗೆ ನಷ್ಟವಾಗಿದ್ದು ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದರು.
ಬಳಿಕ ಬೆಳಗಾವಿ ಜಂಟಿ ಕೃಷಿ ನಿರ್ದೆಶಕ ಜಲಾನಿ ಮೊಕಾಶಿ, ಬೆಳಗಾವಿ ಜಿಲ್ಲೆಯಲ್ಲಿ 38000 ಕ್ವಿಂಟಲ್ ಸೋಯಾಬಿನ್ ಬೀಜ ಪೂರೈಸಲಾಗಿದೆ. ಜಿಲ್ಲೆಯಲ್ಲಿ 10 ಸಾವಿರ ಕ್ವಿಂಟಲ್ ಬೀಜ ಕಳಪೆಯಿಂದ ಕೂಡಿದೆ. ಇಂದು ಕೃಷಿ ಸಚಿವರ ಉನ್ನತ ಮಟ್ಟದ ಸಭೆ ಬೆಂಗಳೂರಿನಲ್ಲಿ ಆಯೋಜಿಸಿದ್ದು, ಸಭೆಯಲ್ಲಿ ಕೈಗೊಳ್ಳುವ ನಿರ್ಧಾರದಂತೆ ನಡೆದುಕೊಳ್ಳಲಾಗುತ್ತದೆ ಎಂದರು.
ಪ್ರತಿಭಟನೆ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇರುವುದು ಕಂಡು ಬಂದಿದೆ. ಪ್ರತಿಭಟನೆ ವೇಳೆ ಸಹಾಯಕ ಕೃಷಿ ನಿರ್ದೇಶಕಿ ಪ್ರತಿಭಾ ಹೂಗಾರ, ಕೃಷಿ ವಿಜ್ಞಾನಿಗಳಾದ ಡಾ. ಪಾಟೀಲ, ಎಸ್.ಎಸ್.ಮೂಲಿ, ಕೃಷಿ ಅಧಿಕಾರಿಗಳಾದ ಕುಂಬಾರ, ಸಹಾಯಕ ಕೃಷಿ ಅಧಿಕಾರಿ ಸಿ.ಬಿ.ಬಂದಕ್ಕನ್ನವರ, ಪಿಕೆಪಿಎಸ್ ಅಧ್ಯಕ್ಷ ಅಶೋಕ ವಾಳದ ಉಪಸ್ಥಿತರಿದ್ದರು.