ಬೆಳಗಾವಿ: ರೈತರಿಗೆ ಕಬ್ಬಿನ ಬಾಕಿ ಬಿಲ್ ಪಾವತಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನಗರದ ಗಣೇಶಪುರದ ಬಳಿಯ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ಕಚೇರಿ ಎದುರು ಪ್ರತಿಭಟಿಸಲಾಯಿತು.
ಈ ವೇಳೆ ರೈತ ಸಂಘದ ಪದಾಧಿಕಾರಿಗಳು, ರೈತರ ಕಬ್ಬಿನ ಬಾಕಿ ಬಿಲ್ ನೀಡುತ್ತಿಲ್ಲ ಎಂದು ಸರ್ಕಾರ ಹಾಗೂ ಆಯುಕ್ತರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿ, ಸಕ್ಕರೆ ಆಯುಕ್ತರ ಕಚೇರಿ ಸ್ಥಳಾಂತರಗೊಂಡು ಮೂರು ತಿಂಗಳಾದರೂ ಅಧಿಕಾರಿ, ಸಿಬ್ಬಂದಿ ಮಾತ್ರ ಕಚೇರಿಗೆ ಬರುತ್ತಿಲ್ಲ. ಇದರಿಂದಾಗಿ ರೈತರು ಮತ್ತಷ್ಟು ಸಮಸ್ಯೆಗೆ ಸಿಲುಕಿದ್ದಾರೆ ಎಂದು ತಮ್ಮ ಅಳಲು ತೋಡಿಕೊಂಡರು.
ಹಲವು ಕಾರ್ಖಾನೆಗಳಿಂದ ಕಬ್ಬು ಬೆಳೆಗಾರರಿಗೆ ಸಾವಿರಾರು ಕೋಟಿ ರೂಪಾಯಿ ಬರಬೇಕಾಗಿದೆ. ಸಕ್ಕರೆ ಆಯುಕ್ತರ ಕಚೇರಿಯಲ್ಲಿ ಒಬ್ಬರೇ ಒಬ್ಬ ಸಿಬ್ಬಂದಿ ಇಲ್ಲ. ಇನ್ನು ಸಕ್ಕರೆ ಆಯುಕ್ತ ಅಕ್ರಂ ಪಾಷಾ ಈವರೆಗೂ ಕಚೇರಿಗೆ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಬ್ಬಿನ ಬಿಲ್ ಬಾಕಿ ಉಳಿಸಿಕೊಂಡ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಎಚ್ಚರಿಕೆ ನೀಡಬೇಕು. ಕಳೆದ ವರ್ಷ ಪ್ರವಾಹ ಹಾಗೂ ಈ ವರ್ಷ ಲಾಕ್‌ಡೌನ್ ಹಿನ್ನೆಲೆ ರೈತರು ತತ್ತರಿಸಿ ಹೋಗಿದ್ದಾರೆ. ಹೀಗಾಗಿ ಆದಷ್ಟು ಬೇಗ ಕಬ್ಬು ಬೆಳೆಗಾರರ ಬಾಕಿ ಹಣ ಪಾವತಿಸುವಂತೆ ರೈತ ಮುಖಂಡರು ಆಗ್ರಹಿಸಿದರು.