ಚಿಕ್ಕೋಡಿ : ಯುಪಿಯ ಹಥ್ರಾಸ್ನಲ್ಲಿ ನಡೆದ ಯುವತಿ ಮೇಲಿನ ಅತ್ಯಾಚಾರ ಪ್ರಕರಣ ಖಂಡಿಸಿ ವಿವಿಧ ದಲಿತ ಸಂಘಟನೆಗಳು ಇಂದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣ ಬಂದ್ಗೆ ಕರೆ ನೀಡಿ, ಯುಪಿ ಸಿಎಂ ಯೋಗಿ ಆದಿತ್ಯನಾಥ್ ಭಾವ ಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿ ಪ್ರತಿಭಟಿಸಿದ್ದಾರೆ.
ಹುಕ್ಕೇರಿ ಪಟ್ಟಣದಲ್ಲಿ ವಿವಿಧ ದಲಿತ ಸಂಘಟನೆಗಳು ಕರೆ ನೀಡಿದ್ದ ಬಂದ್ಗೆ ಹುಕ್ಕೇರಿ ಪಟ್ಟಣ ಸಂಪೂರ್ಣ ಸ್ತಬ್ಧವಾಗಿತ್ತು. ಸ್ವಯಂ ಪ್ರೇರಿತವಾಗಿ ಅಂಗಡಿ-ಮುಗ್ಗಟ್ಟು ಮುಚ್ಚಿ ವ್ಯಾಪಾರಸ್ಥರು ಬಂದ್ಗೆ ಬೆಂಬಲ ಸೂಚಿಸಿದ್ದರು. ಕೆಲಕಾಲ ಬಸ್ ಸಂಚಾರದಲ್ಲೂ ವ್ಯತ್ಯಯವಾಗಿತ್ತು. ಬಂದ್ ಹಿನ್ನೆಲೆ ಅಡವಿಸಿದ್ದೇಶ್ವರ ಮಠದಿಂದ ಕೋರ್ಟ್ ವೃತ್ತದವರೆಗೆ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಲಾಯಿತು.
ರ್ಯಾಲಿಯಲ್ಲಿ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ, ಭಾವಚಿತ್ರದ ಅಣುಕು ಶವಯಾತ್ರೆ ನಡೆಸಲಾಯಿತು. ಈ ಸಂದರ್ಭದಲ್ಲಿ ಯೋಗಿ ಆದಿತ್ಯನಾಥ್ ಭಾವಚಿತ್ರ ಬಳಸಿದ್ದಕ್ಕೆ ಪೊಲೀಸರು ಆಕ್ಷೇಪಿಸಿದರು. ಬಳಿಕ ಮಾರ್ಗ ಮಧ್ಯದಲ್ಲೇ ಭಾವಚಿತ್ರಕ್ಕೆ ಬೆಂಕಿ ಹಚ್ಚಿ, ಯೋಗಿ ವಿರುದ್ಧ ಘೋಷಣೆ ಕೂಗಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.