ಬೆಳಗಾವಿ: ಜಿಲ್ಲೆಯಲ್ಲಿರುವ ಜೀತದಾಳುಗಳನ್ನು ಬಿಡುಗಡೆಗೊಳಿಸಿದ ಪತ್ರ ನೀಡುವಂತೆ ಆಗ್ರಹಿಸಿ ಕರ್ನಾಟಕ ಜೀತದಾಳು ಮತ್ತು ಕೃಷಿ ಕೂಲಿಕಾರ್ಮಿಕರ ಒಕ್ಕೂಟ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿ 245, ಚನ್ನಮ್ಮ ಕಿತ್ತೂರ 100, ರಾಮದುರ್ಗ 345, ಸವದತ್ತಿ 80, ಗೋಕಾಕ 90, ಚಿಕ್ಕೋಡಿ 80, ರಾಯಭಾಗ 150, ಅಥಣಿ 135 ಸೇರಿದಂತೆ ಒಟ್ಟು 1,225 ಜೀತದಾಳುಗಳು ಬಿಡುಗಡೆಗೊಳಿಸುವಂತೆ ಅರ್ಜಿ ಸಲ್ಲಿಸಲಾಗಿದೆ. ಆದರೆ, ಅರ್ಜಿ ಸಲ್ಲಿಸಿದ ಜೀತದಾಳುಗಳಿಗೆ ಬಿಡುಗಡೆಗೊಳಿಸಿ ಪತ್ರ ನೀಡಿಲ್ಲ. ಮನವಿಗೆ ಸ್ಪಂದಿಸುತ್ತಿಲ್ಲ ಎಂದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಜೀತದಾಳುಗಳು ಸಲ್ಲಿಸಿದ ಅರ್ಜಿಗಳನ್ನು ಪರಿಶೀಲನೆ ಮಾಡಿ, ಬಿಡುಗಡೆಗೊಳಿಸಬೇಕು. ಪ್ರತಿ ಜೀತದಾಳುವಿಗೆ ಐದು ಎಕರೆ ಜಮೀನು ನೀಡಬೇಕು. ಸೂಕ್ತ ಪರಿಹಾರ ಮತ್ತು ಪುನರ್ವಸತಿ ಕಲ್ಪಿಸಬೇಕು. ಸರ್ಕಾರ ನಿಗದಿಪಡಿಸಿದ ಕನಿಷ್ಠ ವೇತನ ಪ್ರತಿ ಜೀತದಾಳಿಗೆ ಒದಗಿಸಬೇಕು. ಜೀತ ಜಾಗೃತ ಸಭೆಯನ್ನು ಪ್ರತಿ ಮೂರು ತಿಂಗಳಿಗೊಮ್ಮೆ ನಡೆಸಬೇಕು ಎಂದು ಮನವಿ ಮೂಲಕ ಒತ್ತಾಯಿಸಿದರು.