ಬೆಳಗಾವಿ : ಪಂಚಮಸಾಲಿ ಸಮುದಾಯಯನ್ನು ಒಬಿಸಿ ಪಟ್ಟಿಗೆ ಸೇರ್ಪಡೆ ಮಾಡಬೇಕು ಎಂಬ ಹೋರಾಟದ ಜೊತೆಗೆ ಅಖಿಲ ಭಾರತ ಪಂಚಮಸಾಲಿ ಹಕ್ಕೊತ್ತಾಯ ಸಮಿತಿ ರಚನೆ ಮಾಡಲಾಗಿದೆ.
ನಮ್ಮ ಹಕ್ಕೊತ್ತಾಯಕ್ಕಾಗಿ ಅ.26ರಂದು ಸುವರ್ಣಸೌಧದಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಕೂಡಲಸಂಗಮ ಪೀಠದ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ ಒಟ್ಟು ಜನಸಂಖ್ಯೆಯಲ್ಲಿ ಶೇ.21ರಷ್ಟು ಲಿಂಗಾಯತ ಸಮುದಾಯವಿದೆ. ಅದರಲ್ಲಿ ಶೇ.16ರಷ್ಟು ಪಂಚಮಸಾಲಿ ಲಿಂಗಾಯತ ಸಮುದಾಯವಿದೆ. ನಮ್ಮ ಮೂಲ ಕಸುಬು ಕೃಷಿ.
ಕೇಂದ್ರ ಸರ್ಕಾರ ಅನೇಕ ಸಮುದಾಯಗಳಿಗೆ ಸರ್ಕಾರಿ ಸೌಲಭ್ಯಗಳನ್ನು ನೀಡುತ್ತಿದೆ. ಆದರೆ, ಈವರೆಗೂ ಪಂಚಮಸಾಲಿ ಸಮುದಾಯಕ್ಕೆ ಯಾವುದೇ ಸೌಲಭ್ಯ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪಂಚಮಸಾಲಿ ಸಮುದಾಯದವರು ಎಂದಿಗೂ ಬೇಡಿದ ಕೈಯಲ್ಲ. ಕೈಎತ್ತಿ ಕೊಡುವ ಸಮಯದಾಯ. ನಮ್ಮ ಬೇಡಿಕೆಗೆ ಸರ್ಕಾರ ಸ್ಪಂದಿಸಬೇಕಿದೆ. ಕೋವಿಡ್-19 ಇರುವುದರಿಂದ ಸಾಮಾಜಿಕ ಅಂತರ ಕಾಯ್ದುಕೊಂಡು ಧರಣಿ ನಡೆಸಲಾಗುವುದು ಎಂದರು.
ಸುವರ್ಣಸೌಧದ ಎದುರು ಸಂಗೊಳ್ಳಿ ರಾಯಣ್ಣ, ರಾಣಿ ಚೆನ್ನಮ್ಮಳ ಮೂರ್ತಿ ಸ್ಥಾಪನೆ ಸೇರಿದಂತೆ ಪಂಚಮಸಾಲಿ ಸಮಾಜದ ಬೇಡಿಕೆ ಈಡೇರಿಸಿಕೊಳ್ಳಲು ಹೋರಾಟ ಅನಿವಾರ್ಯವಾಗಿದೆ. ಆದ್ದರಿಂದ ಸರ್ಕಾರ ಕೂಡಲೇ ನಮ್ಮ ಬೇಡಿಕೆಗೆ ಸ್ಪಂದಿಸದಿದ್ರೆ ಮುಂಬರುವ ದಿನದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.