ಬೆಳಗಾವಿ: ಮೈಕ್ರೋ ಫೈನಾನ್ಸ್ ಹಾಗೂ ನಾನಾ ಸಹಕಾರಿ ಸಂಘಗಳಿಂದ ಸಾಲ ಪಡೆದುಕೊಂಡ ಬಡವರು ಹಾಗೂ ನೇಕಾರ ಕಾರ್ಮಿಕರಿಗೆ ಸಾಲ ಮರು ಪಾವತಿಸಲು 6 ತಿಂಗಳು ಕಾಲಾವಕಾಶ ನೀಡುವಂತೆ ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಜಿಲ್ಲಾ ನೇಕಾರರ ವೇದಿಕೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಬಡವರ್ಗದ ಜನರು ಹಾಗೂ ನೇಕಾರ ಕಾರ್ಮಿಕರು, ಸಣ್ಣ ಮೈಕ್ರೋ ಫೈನಾನ್ಸ್, ವಿವಿಧ ಸಹಕಾರಿ ಸಂಘಗಳಲ್ಲಿ ಸಾಲ ಪಡೆದುಕೊಂಡಿದ್ದಾರೆ. ಲಾಕ್ಡೌನ್ ಗಿಂತ ಮೊದಲು ಕಾಲ ಕಾಲಕ್ಕೆ ಸರಿಯಾಗಿ ಮಾಸಿಕ ಕಂತು ಪಾವತಿಸುತ್ತಿದ್ದರು. ಆದರೆ, ಲಾಕ್ ಡೌನ್ ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಗಳಿಗೆ ಸಾಲ ಮರುಪಾವತಿಸಲು 6 ತಿಂಗಳುಗಳ ಕಾಲಾವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ಆದರೆ, ಕೆಲವು ಮೈಕ್ರೋ ಫೈನಾನ್ಸ್ ಹಾಗೂ ಸಹಕಾರಿ ಸಂಘಗಳು ಸಾಲ ವಸೂಲಿಗೆ ಬರುತ್ತಿವೆ. ಸಾಲಕ್ಕೆ ಬಡ್ಡಿ ಹೆಚ್ಚಾಗುತ್ತದೆ. ಸಾಲ ಮರುಪಾವತಿ ಮಾಡುವಂತೆ ಒತ್ತಡ ಹೇರುತ್ತಿವೆ. ಜೀವನ ನಡೆಸುವುದು ಕೂಡ ಕಷ್ಟವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಸಾಲ ಪಾವತಿಸಲು ಸಾಧ್ಯವಾಗುವುದಿಲ್ಲ. ಫೈನಾನ್ಸ್ ಗಳಿಂದ ಸಾಲಗಾರರಿಗೆ ಸಾಲ ತುಂಬುವಂತೆ ಕಿರಿಕಿರಿ ಮಾಡಲಾಗುತ್ತಿದೆ. ಹೀಗಾಗಿ ಸಾಲ ವಸೂಲಿಗೆ ಮುಂದಾಗುತ್ತಿರುವ ಸಂಸ್ಥೆಗಳ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕು. ಬಡವರು ಹಾಗೂ ನೇಕಾರ ಕಾರ್ಮಿಕರು ಪಡೆದ ಸಾಲ ಪಾವತಿಗೆ ಆರು ತಿಂಗಳು ಕಾಲಾವಕಾಶ ನೀಡಬೇಕು, ಬಡ್ಡಿಯನ್ನು ಮನ್ನಾ ಮಾಡಬೇಕು ಎಂದು ಮನವಿ ಮೂಲಕ ಆಗ್ರಹಿಸಿದರು.