ಬೆಳಗಾವಿ : ಹಿಡಕಲ್ ಜಲಾಶಯದ ಹಿನ್ನೀರಿನಲ್ಲಿ ಜಮೀನು ಕಳೆದುಕೊಂಡು 43 ವರ್ಷ ಕಳೆದರೂ ಪರಿಹಾರ ಸಿಗದ ಹಿನ್ನೆಲೆಯಲ್ಲಿ ನ್ಯಾಯಕ್ಕೆ ಆಗ್ರಹಿಸಿ ಬೆಳಗಾವಿಯ ಡಿಸಿ ಕಚೇರಿ ಮುಂಭಾಗದಲ್ಲಿ ಸಂತ್ರಸ್ಥರು ಅನಿರ್ಧಿಷ್ಟಾವಧಿ ಧರಣಿಗೆ ಮುಂದಾಗಿದ್ದಾರೆ. ಹುಕ್ಕೇರಿ ತಾಲೂಕಿನ ಬೀರನಹಳ್ಳಿ, ಮನಗುತ್ತಿ, ಇಸ್ಲಾಂಪೂರ, ಗುಡಗನಟ್ಟಿ, ಹಳೇ ವಂಟಮೂರಿ ಸೇರಿ ಇನ್ನಿತರ ಗ್ರಾಮಗಳ ನೊಂದ ಜನರು ಇಂದು ಬೆಳಗಾವಿಯ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನಾ ರ‍್ಯಾಲಿ ನಡೆಸಿದರು.
ಬಳಿಕ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ಆರಂಭಿಸಿದರು. ಹಿಡಕಲ್ ಡ್ಯಾಂಗೆ ಹೊಲ, ಮನೆ ಕಳೆದುಕೊಂಡು ಭೀಕ್ಷೆ ಬೇಡುತ್ತಿದ್ದೇವೆ. ಭೂಮಿ ನೀಡದಿದ್ದರೆ ಸಾಯುವುದು ಖಚಿತ, ಜಮೀನು ಪರಿಹಾರ ನೀಡಿ ಇಲ್ಲದಿದ್ದರೆ ವಿಷ ನೀಡಿ ಸಾಯಿಸಿರಿ ಎಂಬ ಎಚ್ಚರಿಕೆ ಫಲಕಗಳನ್ನು ಪ್ರದರ್ಶಿಸಿ, ಹಲಗಿ ಬಾರಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಮಾತನಾಡಿ, ಕಳೆದ 43 ವರ್ಷಗಳಿಂದ 58 ಕುಟುಂಬಸ್ಥರು ಕಚೇರಿಯಿಂದ ಕಚೇರಿಗೆ ಅಲೆದಾಡಿದರೂ ಪರಿಹಾರ ಮಾತ್ರ ಸಿಕ್ಕಿಲ್ಲ. ರಾಜ್ಯ ಸರ್ಕಾರ ಜಮೀನು ಮಂಜೂರು ಮಾಡಿದೆ. ಆದರೆ, ಪಹಣಿ ಪತ್ರವನ್ನು ಅಧಿಕಾರಿಗಳು ತೋರಿಸುತ್ತಿಲ್ಲ. ಬರುವ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ಮಾಡಿ ಸಂತ್ರಸ್ತರಿಗೆ ಪರಿಹಾರ ಕೊಡಿಸಬೇಕು. ಪರಿಹಾರ ನೀಡುವವರೆಗೂ ಇಂದಿನಿಂದ ಡಿಸಿ ಕಚೇರಿ ಮುಂದೆ ಅನಿರ್ಧಿಷ್ಟಾವಧಿಯವರೆಗೆ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ಕೊಟ್ಟರು.
1980ರಲ್ಲಿ ಸರ್ಕಾರದಿಂದ ನೆರೆ ಸಂತ್ರಸ್ತರಿಗೆ ಜಮೀನು ಮಂಜೂರಾಗಿದೆ. ಆದರೆ, ಈವರೆಗೆ ಪಹಣಿ ಪತ್ರ, ಜಮೀನನ್ನು ಅಧಿಕಾರಿಗಳು ನೀಡಿಲ್ಲ. ಹೀಗಾಗಿ ಭೂಪರಿಹಾರ, ಬೆಳೆ ಪರಿಹಾರ ನೀಡಬೇಕು. ಮನೆಗಳನ್ನ ಕಳೆದುಕೊಂಡಿರುವ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಬೇಕು ಎಂಬ ಆಗ್ರಹ ಕೇಳಿ ಬಂದಿದೆ.
ಈ ವೇಳೆ, ಈಟಿವಿ ಭಾರತ ಜೊತೆಗೆ ಮಾತನಾಡಿದ ಸಂತ್ರಸ್ತ ಮಡ್ಡೆಪ್ಪ ಪೂಜೇರಿ, ಹಿಡಕಲ್ ಡ್ಯಾಮ್ ಗಾಗಿ ಹೊಲ, ಮನೆ, ಊರು ಕಳೆದುಕೊಂಡು ಭೀಕ್ಷೆ ಬೇಡುವಂತಾಗಿದೆ. ನ್ಯಾಯ ಸಿಗೋವರೆಗೂ ಇಲ್ಲಿಂದ ಹೋಗಲ್ಲ. ಇಲ್ಲದಿದ್ದರೆ ಇಸ್ರೇಲ್ ನಲ್ಲಿ ಬಾಂಬ್ ದಾಳಿ ಮಾಡುವಂತೆ ಅಧಿಕಾರಿಗಳು ನಮ್ಮ ಮೇಲೆ ಬಾಂಬ್ ಹಾಕಿ ಕೊಲ್ಲಲಿ ಎಂದು ಅಳಲು ತೋಡಿಕೊಂಡರು.
ಸತ್ಯವ್ವ ನಾಯಿಕ್ ಮತ್ತು ಕೆಂಪವ್ವ ಗಸ್ತಿ ಮಾತನಾಡಿ, ಇದ್ದ ಹೊಲ ಕಳೆದುಕೊಂಡು ನಾವು ಅತಂತ್ರರಾಗಿದ್ದೇವೆ. ಕೂಲಿ ನಾಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ. ನಮಗೆ ಸಿಗಬೇಕಾದ ಪರಿಹಾರ ಕೊಡಲೇಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆಯೇ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು.
ಇದನ್ನೂ ಓದಿ : ಮುಂದಿನ ಐದು ವರ್ಷಗಳಲ್ಲಿ ಭಾರತ, ಕರ್ನಾಟಕ ಏಡ್ಸ್ ಮುಕ್ತವಾಗಲಿ: ಸಿಎಂ ಸಿದ್ದರಾಮಯ್ಯ