ಬೆಳಗಾವಿ/ಶಿವಮೊಗ್ಗ/ಮೈಸೂರು: ದೇಶದ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತ ಭಾರತದ ಕುಸ್ತಿ ಫೆಡರೇಷನ್ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ ಸಿಂಗ್ ಅವರನ್ನು ತಕ್ಷಣವೇ ಬಂಧಿಸುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳು ಇಂದು ಪ್ರತಿಭಟನೆ ನಡೆಸಿದವು. ಬೆಳಗಾವಿ, ಶಿವಮೊಗ್ಗ, ಮೈಸೂರು ಸೇರಿದಂತೆ ಹಲವಡೆ ಪ್ರತಿಭಟನೆ ನಡೆಸಿದ ವಿವಿಧ ಸಂಘಟನೆಗಳು, ಬ್ರಿಜ್ ಭೂಷಣ್ ಸಿಂಗ್ ಅವರನ್ನು ಬಂಧಿಸುವಂತೆ ಒತ್ತಾಯ ಮಾಡಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಬೆಳಗಾವಿ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದ ಹೋರಾಟಗಾರರು, ರಾಷ್ಟ್ರಪತಿಗಳು ಕೂಡಲೇ ಮಧ್ಯಪ್ರವೇಶಿಸಿ, ಆರೋಪಿ ಬ್ರಿಜ್ ಭೂಷಣ್ ಸಿಂಗ್ ಅವರನ್ನು ಭಾರತ ಕುಸ್ತಿ ಫೆಡರೇಷನ್ ಅಧ್ಯಕ್ಷ ಸ್ಥಾನದಿಂದ ತಕ್ಷಣ ಕಿತ್ತು ಹಾಕಿ ಬಂಧಿಸಬೇಕು. ನಿಷ್ಪಕ್ಷಪಾತ ತನಿಖೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ ಜಿಲ್ಲಾಧಿಕಾರಿ ನಿತೇಶ ಪಾಟೀಲ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
ಒಲಿಂಪಿಕ್ ಪದಕ ವಿಜೇತರು, ವಿಶ್ವ ಚಾಂಪಿಯನ್ ಕುಸ್ತಿಪಟುಗಳಾದ ಸಾಕ್ಷಿ ಮಲ್ಲಿಕ್, ವಿನಿಷ್ ಪೊಗಟ್ ಮುಂತಾದ ಕ್ರೀಡಾಪಟುಗಳ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತ ಬ್ರಿಜ್ ಭೂಷಣ್ ಸಿಂಗ್ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ನವದೆಹಲಿಯ ಜಂತರ್ ಮಂಥರ್‌ನಲ್ಲಿ ಭಜರಂಗ್ ಪೂನಿಯಾ ಸೇರಿದಂತೆ ದೇಶದ ಹಲವು ಕುಸ್ತಿ ಕ್ರೀಡಾಪಟುಗಳು ಕಳೆದ 45 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ, ಆರೋಪಿಯನ್ನು ಈವರೆಗೆ ಬಂಧಿಸಿಲ್ಲ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ಈಟಿವಿ ಭಾರತ ಜೊತೆಗೆ ಮಾತನಾಡಿದ ಭಾರತೀಯ ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಸಿದಗೌಡ ಮೊದಗಿ, ರಾಷ್ಟ್ರಕ್ಕೆ ಕೀರ್ತಿ ತಂದುಕೊಟ್ಟ ಕ್ರೀಡಾಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದು ಇಡೀ ದೇಶವೇ ತಲೆ ತಗ್ಗಿಸುವಂತದ್ದು. ಸಾಮಾಜಿಕ ನ್ಯಾಯದಡಿಯಲ್ಲಿ ಸಂಸತ್ ಸ್ಥಾನದಿಂದ ಭೂಷಣ್ ಅವರನ್ನು ವಜಾ ಮಾಡಬೇಕು. ಆ ಸ್ಥಾನದಲ್ಲಿ ಕುಳಿತುಕೊಳ್ಳಲು ಆತ ಯೋಗ್ಯನಲ್ಲ. ಆತ ಓರ್ವ ಕಾಮುಕ ವ್ಯಕ್ತಿಯಾಗಿದ್ದು, ತಕ್ಷಣವೇ ಬಂಧಿಸಬೇಕು. ಇಂದು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದ್ದೇವೆ. ಜೂ. 5ರಂದು ದೊಡ್ಡ ಪ್ರಮಾಣದ ಪ್ರತಿಭಟನೆ ಮಾಡುತ್ತೇವೆ ಎಂದರು.
ಬಳಿಕ ರೈತ ಮುಖಂಡೆ ಜಯಶ್ರೀ ಗುರನ್ನವರ ಮಾತನಾಡಿ, ವಿಶ್ವಕ್ಕೆ ಕೀರ್ತಿ ತಂದ ಮಹಿಳಾ ಕ್ರೀಡಾಪಟುಗಳು ಇಂದು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಮೊನ್ನೆ ಆರೋಪಿ ಬ್ರಿಜ್ ಭೂಷಣ ಸಿಂಗ್ಗೆ ಸಂಸತ್ತಿನಲ್ಲಿ ಪ್ರಧಾನಮಂತ್ರಿ ಮೋದಿ ಅವರು ಸನ್ಮಾನ ಮಾಡುತ್ತಿದ್ದಾರೆ. ಇದೇ ಏನು ನಿಮ್ಮ ಬೇಟಿ ಬಚಾವ್ ಬೇಟಿ ಪಡಾವ್ ಘೋಷಣೆ ಅರ್ಥ? ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಮಾನವನ್ನ ತಾವು ಹರಾಜು ಹಾಕುತ್ತಿದ್ದಾರೆ. ನಿಜವಾಗಲೂ ನಿಮಗೆ ಬೇಟಿ ಬಚಾವ್, ಬೇಟಿ ಪಡಾವ್ ಕಾಳಜಿ ಇದ್ದರೆ ತಕ್ಷಣವೇ ಆತನನ್ನು ಬಂಧಿಸಿ ಕಾನೂನಿಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ನ್ಯಾಯವಾದಿ ಎನ್.ಆರ್.ಲಾತೂರ್, ಜಿ.ವ್ಹಿ.ಕುಲಕರ್ಣಿ, ಶಿವಲೀಲಾ ಮಿಸಾಳೆ, ಕಿರಣ ಬೇಡಿ, ವೈಶಾಲಿ ಕಮ್ಮಾರ, ಇಸ್ಮಾಯಿಲ್ ಮಕಾನದಾರ್, ವಿ. ಸುಶೀಲಾ, ಸುಜೀತ್ ಮುಳಗುಂದ ಸೇರಿ ಇನ್ನಿತರರು ಇದ್ದರು.
ಶಿವಮೊಗ್ಗ ರೈತ ಸಂಘದಿಂದ ಪ್ರತಿಭಟನೆ: ಇದೇ ವಿಚಾರವಾಗಿ ಶಿವಮೊಗ್ಗದಲ್ಲಿಯೂ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಶಿವಮೊಗ್ಗದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪನವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಮೇಲೆ ಕುಸ್ತಿ ಪಟುಗಳ ಮೇಲೆ ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಎಫ್ಐಆರ್ ದಾಖಲಾಗಿದ್ದರು ಸಹ ಅವರನ್ನು ಬಂಧಿಸದೇ ಪೊಲೀಸರು ಕಾಲಹರಣ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದ ಗೌರವ ಹೆಚ್ಚಿಸಿದ ಕುಸ್ತಿ ಪಟುಗಳು ದೆಹಲಿಯ ಜಂತರ್ ಮಂತರ್ನಲ್ಲಿ ಅನಿರ್ದಿಷ್ಟವಧಿ ಪ್ರತಿಭಟನೆ ನಡೆಸುತ್ತಿದ್ದಾರೆ. ಭಾರತದ ಕುಸ್ತಿ ಫಡರೇಷನ್ ಮುಖ್ಯಸ್ಥ ಹಾಗೂ ಇನ್ನಿತರ ಸಿಬ್ಬಂದಿ, ಅಪ್ರಾಪ್ತ ಹೆಣ್ಣು ಮಕ್ಕಳು ಸೇರಿದಂತೆ ಪ್ರಖ್ಯಾತ ಮಹಿಳಾ ಕುಸ್ತಿ ಪಟುಗಳು ಲೈಂಗಿಕ ಕಿರುಕುಳ ಹಾಗೂ ಹಿಂಸೆಗೆ ಒಳಪಡಿಸಿದ್ದಾರೆ. ಕೇಂದ್ರ ಸರ್ಕಾರ ಬೇಟಿ ಬಚಾವ್ ಬೇಟಿ ಪಡಾವ್ ಎಂದು ಘೋಷಿಸಿದೆ. ಆದರೆ, ದೇಶದಲ್ಲಿ ಮಹಿಳಾ ಕುಸ್ತಿ ಪಟುಗಳಿಗೆ ರಕ್ಷಣೆಯೇ ಇಲ್ಲದಂತಾಗಿದೆ. ಕಳೆದ ಭಾನುವಾರ ಕುಸ್ತಿಗಳು ನಡೆಸಿದ ಪ್ರತಿಭಟನೆಯ ವೇಳೆ ಪೊಲೀಸರು ಅವರೂಂದಿಗೆ ದೌರ್ಜನ್ಯ ನಡೆಸಿದ್ದಾರೆ. ಇದರಿಂದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ತಕ್ಷಣ ಬಂಧಿಸಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ದೇಶಕ್ಕೆ ಗೌರವ ತಂದ ಕುಸ್ತಿ ಪಟುಗಳಿಗೆ ಲೈಂಗಿಕ ದೌರ್ಜನ್ಯ ನಡೆಸಿದ್ದು ಖಂಡನೀಯವಾಗಿದೆ. ಸಂಯುಕ್ತ ಕಿಸಾನ್ ಪಂಚಾಯತ್ ಕರೆಯ ಮೇರೆಗೆ ನಮ್ಮ ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಲಾಗುತ್ತಿದೆ ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪನವರು ತಿಳಿಸಿದ್ದಾರೆ.
ಮೈಸೂರಿನಲ್ಲಿಯೂ ಸಿಂಗ್ ಬಂಧಿಸುವಂತೆ ಆಗ್ರಹ: ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ಕಿರುಕುಳದ ಆರೋಪ ಎದುರಿಸುತ್ತಿರುವ ಸಂಸದ ಬ್ರಿಜ್ ಭೂಷಣ್ ಸಿಂಗ್ ಅವರನ್ನು ಕೂಡಲೇ ಬಂಧಿಸಬೇಕು ಹಾಗೂ ಭಾರತೀಯ ಕುಸ್ತಿ ಫೆಡರೇಷನ್ ಇಂದ ಆತನನ್ನು ವಜಾ ಮಾಡುವಂತೆ ಆಗ್ರಹಿಸಿ ಮೈಸೂರಿನಲ್ಲಿಯೂ ಪ್ರತಿಭಟನೆ ನಡೆಸಿದರು.
ಲೈಂಗಿಕ ದೌರ್ಜನ್ಯ ಹಾಗೂ ಕಿರುಕುಳ ಆರೋಪ ಎದುರಿಸುತ್ತಿರುವ ಬ್ರಿಜ್ ಭೂಷಣ್ ಸಿಂಗ್ ಅವರನ್ನು ಕೂಡಲೇ ಬಂಧಿಸಬೇಕು. ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳಿಗೆ ನ್ಯಾಯ ಕೊಡಬೇಕು. ಕೂಡಲೇ ಭಾರತೀಯ ಕುಸ್ತಿ ಫೆಡರೇಶನ್ ಇಂದ ಇತನನ್ನ ವಜಾಗೊಳಿಸಬೇಕು ಎಂದು ಆಗ್ರಹಿಸಿ ಸಂಯುಕ್ತ ಹೋರಾಟ ಕರ್ನಾಟಕ ಸಂಘ, ಮಹಿಳಾ ಪರ ಹೋರಾಟಗಾರರು ಮೈಸೂರಿನ ಗಾಂಧಿ ವೃತ್ತದ ಬಳಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾನಿರತರು, ಪ್ರಧಾನಿ ನರೇಂದ್ರ ಮೋದಿಯವರು ಬೇಟಿ ಬಚಾವ್ ಬೇಟಿ ಪಡಾವ್ ಎಂದು ಹೇಳಿದ್ದಾರೆ. ಆದರೆ, ಅವರೆ ಅತ್ಯಾಚಾರಿಗಳಿಗೆ ರಕ್ಷಣೆ ನೀಡುತ್ತಿದ್ದಾರೆ. ಲೈಂಗಿಕ ಕಿರುಕುಳ ಆರೋಪಕ್ಕೆ ಗುರಿಯಾದ, ಬಿಜೆಪಿ ಸಂಸದರು ಆಗಿರುವ ಬ್ರಿಜ್ ಭೂಷಣ್ ಸಿಂಗ್ ಅವರನ್ನು ಕೂಡಲೇ ಬಂಧಿಸಬೇಕು. ಆತನ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಕೇಂದ್ರ ಸರ್ಕಾರ ಮುಂದಿನ ದಿನಗಳಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಆಗ್ರಹಿಸಿದರು.
ಇದನ್ನೂ ಓದಿ: ಮಣಿಪುರ ಹಿಂಸಾಚಾರ: ನಿವೃತ್ತ ನ್ಯಾಯಾಧೀಶರ ಸಮಿತಿಯಿಂದ ತನಿಖೆ, ನಾಳೆಯಿಂದ ಕೂಂಬಿಂಗ್