ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕಂಕಣವಾಡಿ ಪಟ್ಟಣದಲ್ಲಿ ಗಾಯರಾಣಾ ಭೂಮಿಯಲ್ಲಿ ಸುಮಾರು 50 ವರ್ಷಗಳಿಂದ 1,500ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ಈ ಮನೆಗಳನ್ನು ತೆರವುಗೊಳಿಸಬಾರದೆಂದು ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ಆದರೆ, ರಾಯಬಾಗ ಶಾಸಕ ಧುರ್ಯೋದನ ಐಹೊಳೆ ಅವರು ಪ್ರತಿಭಟನೆ ಸ್ಥಳಕ್ಕೆ ಆಗಮಿಸದೆ ಕಾರ್ಯಕರ್ತರ ಮನೆಗೆ ಹೋಗಿದ್ದರಿಂದ ಕಂಕಣವಾಡಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಶಾಸಕ ಧುರ್ಯೋದನ ಐಹೊಳೆ ಅವರಿಗೆ ಘೇರಾವ್ ಹಾಕಿ ಅವರ ವಿರುದ್ಧ ಘೋಷಣೆ ಕೂಗಿದರು. 'ನೀವು ಶಾಸಕರಾಗಿದ್ದು ಯಾವುದಕ್ಕೂ ಪ್ರಯೋಜನವಿಲ್ಲ. ಜನರ ತೊಂದರೆಗೆ ಸ್ಪಂದಿಸುತ್ತಿಲ್ಲ' ಎಂದು ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡರು.
ಪ್ರತಿಭಟನೆಯ ಕಾವು ಹೆಚ್ಚಾಗುತ್ತಿದ್ದಂತೆ ಶಾಸಕರು ಪೊಲೀಸರ ನೆರವಿನಿಂದ ಪ್ರತಿಭಟನಾ ಸ್ಥಳದಿಂದ ತೆರಳಿದರು. ಈ ವೇಳೆ ಪ್ರತಿಭಟನೆ ನಿರತರು ಕೊರೊನಾ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸರ್ಕಾರದ ಮಾರ್ಗ ಸೂಚಿಯನ್ನು ಮರೆತರು.