ಅಥಣಿ: ರಾಜ್ಯ ಸರ್ಕಾರದ ಭೂಸುಧಾರಣಾ ಕಾಯ್ದೆ ತಿದ್ದುಪಡಿ ಖಂಡಿಸಿ ಅಥಣಿ ಭಾರತಿ ಕಿಸಾನ್ ಸಂಘದ ವತಿಯಿಂದ ಮಿನಿ ವಿಧಾನಸೌಧದಲ್ಲಿ ಬಳಿ ಸಾಂಕೇತಿಕವಾಗಿ ಪ್ರತಿಭಟನೆ ಮಾಡಲಾಯಿತು.
ಭಾರತಿ ಕಿಸಾನ್ ಸಂಘದ ಉಪಾಧ್ಯಕ್ಷ ಶ್ರೀಶೈಲ ಜನಗೌಡ ಮಾತನಾಡಿ, ರಾಜ್ಯ ಸರ್ಕಾರ ಭೂಸುಧಾರಣೆ ಕಾಯ್ದೆ ತಿದ್ದುಪಡಿ ವಿಧೇಯಕವನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವುದು ವಿಪರ್ಯಾಸ. ಈ ಕಾಯ್ದೆ ರೈತರಿಗೆ ಮಾರಕವಾಗಿದೆ. ಮುಂದೊಂದು ದಿನ ಕೃಷಿ ಜಮೀನುಗಳಲ್ಲಿ ಕಾರ್ಖಾನೆ ಉದ್ಯಮಿಗಳ ಮನೆಗಳು ನಿರ್ಮಾಣವಾಗುತ್ತವೆ. ಇದರಿಂದ ತಿನ್ನಲು ಅನ್ನವಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತದೆ. ರೈತರಿಗೆ ರಾಜ್ಯ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.
ಭಾರತೀಯ ಕಿಸಾನ್ ಸಂಘದ ಕಾರ್ಯಧ್ಯಕ್ಷ ಭರಮು ನಾಯಕ ಮಾತನಾಡಿ, ರಾಜ್ಯ ಸರ್ಕಾರ ಭೂಸುಧಾರಣೆ ಕಾಯ್ದೆ ತಿದ್ದುಪಡಿ ಆಘಾತಕಾರಿ ನಿರ್ಧಾರ. ಕೃಷಿ ಕ್ಷೇತ್ರ ಅಳಿವಿನ ಅಂಚಿನತ್ತ ಸಾಗಿಸುವುದರಲ್ಲಿ ಸಂದೇಹವೇ ಇಲ್ಲ. ರೈತರು ಮತ್ತು ಕೃಷಿ ಆಧಾರಿತ ಸಮಸ್ತ ಗ್ರಾಮೀಣ, ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆ ಈ ಕ್ರಮದಿಂದ ಕುಸಿದು ಬೀಳುವುದು ಖಚಿತ ಎಂದು ಹೇಳಿದರು.
ಇದೇ ವೇಳೆ ಅಥಣಿ ತಹಶೀಲ್ದಾರ್ ದುಂಡಪ್ಪ ಕೋಮಾರ ಮೂಲಕ ರಾಷ್ಟ್ರಪತಿ ಅವರಿಗೆ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.