ಬೆಳಗಾವಿ: ಎಪಿಎಂಸಿ ಇದ್ದರೂ ಜೈ ಕಿಸಾನ್ ಹೋಲ್ಸೆಲ್ ತರಕಾರಿ ಮಾರುಕಟ್ಟೆ ಸ್ಥಾಪನೆಗೆ ಲೈಸೆನ್ಸ್ ನೀಡಿದ್ದಕ್ಕೆ ಇಲ್ಲಿನ ಎಪಿಎಂಸಿ ಕಾರ್ಯದರ್ಶಿಗೆ ವ್ಯಾಪಾರಸ್ಥರು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಎಪಿಎಂಸಿ ಹೋಲ್ ಸೇಲ್ ತರಕಾರಿ ಮಾರುಕಟ್ಟೆಗೆ ಸೆಡ್ಡು ಹೊಡೆದು ಖಾಸಗಿ ತರಕಾರಿ ಮಾರುಕಟ್ಟೆ ಕಾರ್ಯಾರಂಭ ಮಾಡಿದೆ. ಇದರಿಂದ ಇಲ್ಲಿನ ಎಪಿಎಂಸಿ ಮೇಲೆ ಆಗುತ್ತಿರುವ ಪರಿಣಾಮಗಳ ಬಗ್ಗೆ ಚರ್ಚಿಸಲು ಬೆಳಗಾವಿ ಎಪಿಎಂಸಿ ಅಧ್ಯಕ್ಷ ಯುವರಾಜ್ ಕದಂ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಸಭೆಯಲ್ಲಿ ಕಾರ್ಯದರ್ಶಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ವ್ಯಾಪಾರಿಗಳು ಸಭೆಯಲ್ಲಿ ಗದ್ದಲ, ಗಲಾಟೆ ನಡೆಸಿದರು.
ಎಪಿಎಂಸಿ ಕಾರ್ಯದರ್ಶಿ ಡಾ.ಕೆ.ಕೊಡಿಗೌಡಗೆ ಮುತ್ತಿಗೆ ಹಾಕಿ ತೀವ್ರ ತರಾಟೆ ತೆಗೆದುಕೊಂಡರು. ಹಣ ಪಡೆದು ಖಾಸಗಿ ಮಾರುಕಟ್ಟೆಗೆ ಲೈಸೆನ್ಸ್ ನೀಡಲಾಗಿದೆ ಎಂದು ಆರೋಪಿಸಿದರು. ಲಕ್ಷಾಂತರ ರೂಪಾಯಿ ಹಣ ನೀಡಿ ಎಪಿಎಂಸಿಯಲ್ಲಿ ಮಳಿಗೆ ಖರೀದಿಸಿದ್ದೇವೆ. ಮಳಿಗೆಗಳನ್ನು ವಾಪಸ್ ಪಡೆದು ಹಣ ಹಿಂದಿರುಗಿಸಬೇಕು. ಜೈ ಕಿಸಾನ್ ತರಕಾರಿ ಮಾರುಕಟ್ಟೆ ಸ್ಥಾಪನೆ ಬಳಿಕ ಒಮ್ಮೆಯೂ ಎಪಿಎಂಸಿ ತರಕಾರಿ ಮಾರ್ಕೆಟ್‌ಗೆ ಭೇಟಿ ನೀಡಿಲ್ಲ ಎಂದು ಕಾರ್ಯದರ್ಶಿ ಡಾ.ಕೆ.ಕೊಡಿಗೌಡ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಎಪಿಎಂಸಿ ಅಧ್ಯಕ್ಷ ಯುವರಾಜ್ ಕದಂ, ಖಾಸಗಿ ಮಾರ್ಕೆಟ್‌ಗೆ ಲೈಸೆನ್ಸ್ ನೀಡದಂತೆ ಎರಡು ಬಾರಿ ಠರಾವು ಮಾಡಿದ್ದೇವೆ. ಈ ಮಾರ್ಕೆಟ್ ಸ್ಥಾಪನೆಯಾದರೆ ಸರ್ಕಾರಕ್ಕೆ ಎಷ್ಟು ನಷ್ಟವಾಗುತ್ತೆ ಎಂದು ತಿಳಿಸಿದ್ದೇವೆ. ಸಚಿವರಿಗೂ ಮನವಿ ಮಾಡಿದರೂ ಸಹ ಖಾಸಗಿ ಮಾರ್ಕೆಟ್‌ಗೆ ಲೈಸೆನ್ಸ್ ನೀಡಿದ್ದಾರೆ ಎಂದರು.
ಓದಿ: ಪರ್ಸೆಂಟೇಜ್ ಲೆಕ್ಕದಲ್ಲಿ ಪಿಡಿಒಗಳನ್ನು ಲಂಚಕ್ಕಾಗಿ ಪೀಡಿಸುತ್ತಿದ್ದ ಶ್ರೀರಂಗಪಟ್ಟಣ ಇಒ ಅಮಾನತು