ಬೆಳಗಾವಿ: ರಾಜ್ಯದಲ್ಲಿ ಸರ್ಕಾರ ರಚಿಸಿರುವ ಮೈತ್ರಿ ನಾಯಕರಿಗೆ ಅಧಿಕಾರ ದಾಹವೇ ಮುಖ್ಯವೇ ಹೊರತು ರಾಜ್ಯದ ಪ್ರಗತಿ ಅಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಕೈ-ದಳ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಚಿಕ್ಕೋಡಿ ಪಟ್ಟಣದ ಬಿ ಕೆ ಕಾಲೇಜು ಆವರಣದಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೈತ್ರಿ ಸರ್ಕಾರ ರಾಷ್ಟ್ರೀಯತೆ ವಿರೋಧಿಸುವುದು, ಕುಟುಂಬ ರಾಜಕಾರಣಕ್ಕೆ ಬೆಂಬಲ, ಭ್ರಷ್ಟಾಚಾರವನ್ನೇ ರಾಜ್ಯದ ಸರ್ಕಾರ ಶಿಷ್ಟಾಚಾರ ಮಾಡಿಕೊಂಡಿದೆ ಎಂದು ಆರೋಪಿಸಿದರು.
ಸಿಎಂ ಹೆಚ್ಡಿಕೆ ದೇಶದ ಜನರನ್ನು ಅಪಮಾನಿಸಿದ್ದಾರೆ. ದೇಶದ ಸ್ವಾಭಿಮಾನಿ ಜನ ಇದನ್ನು ಒಪ್ಪಲು ಸಾಧ್ಯವೇ? ದೇಶಭಕ್ತಿಯನ್ನು ಹೆಚ್ಡಿಕೆ ಹಸುವಿಗೆ ಹೋಲಿಸಿದ್ದಾರೆ. ಇದು ದೇಶದ ಸೈನಿಕರಿಗೆ ಮಾಡಿರುವ ಅಪಮಾನ. ಸಾರ್ವಜನಿಕ ಜೀವನದಿಂದ ದೇವೇಗೌಡ ಕುಟುಂಬವನ್ನು ಜನತೆ ದೂರ ಇಡಲು ಈ ಅಪಮಾನವೇ ಸಾಕು ಎಂದು ವಾಗ್ದಾಳಿ ನಡೆಸಿದರು.
ಮಹಾ ಮೈತ್ರಿಯಲ್ಲಿ ದೇಶದ ಅಭಿವೃದ್ಧಿ ಬಗ್ಗೆ ಯಾವುದೇ ಯೋಜನೆಯಿಲ್ಲ. ಕೇವಲ ಕುಟಂಬಗಳ ಅಭಿವೃದ್ಧಿಯೇ ಅವರ ಮೂಲ ಮಂತ್ರವಾಗಿದೆ. ಐದು ವರ್ಷದಲ್ಲಿ ನಮ್ಮ ಸರ್ಕಾರ ಬಲಿಷ್ಠವಾಗಿ ಕೆಲಸ ಮಾಡಿರುವ ಬಗ್ಗೆ ಖುಷಿ ಇದೆಯಾ ಎಂದು ನೆರೆದ ಜನರನ್ನು ಪ್ರಶ್ನಿಸಿದರು. ಮೋದಿ ಉಗ್ರರ ಮೇಲೆ ನಡೆಸಿರುವ ದಾಳಿಯ ಸಾಕ್ಷಿ ಕೇಳುತ್ತಿರುವ ಕಾಂಗ್ರೆಸ್ಗೆ ಪಾಠ ಕಲಿಸುವಂತೆ ಕೋರಿದರು.