ಬೆಳಗಾವಿ : ನಾಳೆ ಕುಂದಾನಗರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ಕಾಮಗಾರಿ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯನ್ನು ನೆರವೇರಿಸಲು ಆಗಮಿಸುತ್ತಿದ್ದು, ಅವರ ಸ್ವಾಗತಕ್ಕೆ ಜನಪ್ರತಿನಿಧಿಗಳ ಬದಲು ಕಾಯಕಯೋಗಿಗಳಿಂದ ಸ್ವಾಗತ ಕೋರಲು ನೂತನ ಪ್ರಯೋಗಕ್ಕೆ ರಾಜ್ಯ ಬಿಜೆಪಿ ವರಿಷ್ಠರು ತೀರ್ಮಾನ ಮಾಡಿದ್ದಾರೆ.
ನಾಳೆ ಮಧ್ಯಾಹ್ನ ಎರಡು ಗಂಟೆಗೆ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸುತ್ತಿದ್ದು, ಇವರ ಸ್ವಾಗತಕ್ಕೆ ಐದು ಜನ ಕಾಯಕಯೋಗಿಗಳಿಂದ ಪ್ರಧಾನ ಸೇವಕನಿಗೆ ಸ್ವಾಗತಿಸಲು ತೀರ್ಮಾನ ಮಾಡಿದ್ದು, ಐದು ಜನ ಕಾರ್ಮಿಕರನ್ನು ಆಯ್ಕೆ ಮಾಡಲಾಗಿದೆ. ನೇಕಾರ, ಕಾರ್ಮಿಕ ರೈತ ಮಹಿಳೆ, ಪೌರ ಕಾರ್ಮಿಕ ಮಹಿಳೆ, ಆಟೋ ಚಾಲಕರಿಗೆ ಅವಕಾಶ ನೀಡಲಾಗಿದೆ.
ಆಟೋ ಚಾಲಕ ಮಯೂರ ಚೌಹಾಣ್. ಪೌರ ಕಾರ್ಮಿಕ ಮೀನಾಕ್ಷಿ ತಳವಾರ. ಕೂಲಿ ಕಾರ್ಮಿಕ ಮಂಗೇಶ ಬಸ್ತವಾಡಕರ್. ರೈತ ಮಹಿಳೆ ಶೀಲಾ ಬಾಬಾರುವಾಕ್ ಖನ್ನುಕರ್, ನೇಕಾರ ಕಲ್ಲಪ್ಪ ಟೋಪಗಿ ಅವರಿಂದ ಪ್ರಧಾನಿ ನರೇಂದ್ರ ಮೋದಿ ಅವರು ಬೆಳಗಾವಿಗೆ ಆಗಮಿಸುತ್ತಿದ್ದಂತೆ ಹೂಗುಚ್ಚ ನೀಡಿ ಬೆಳಗಾವಿಗೆ ಸ್ವಾಗತಿಸಲಾಗುವುದು ಎಂದು ಬೆಳಗಾವಿ ಭಾಜಪಾ ನಾಯಕರು ತೀರ್ಮಾನಿಸಿದ್ದಾರೆ.
ಶಾಸಕ ಅಭಯ್ ಪಾಟೀಲ್ ಅವರ ನೇತೃತ್ವದಲ್ಲಿ ಆ ವರ್ಗದ ಕಾರ್ಮಿಕರನ್ನು ಆಯ್ಕೆ ಮಾಡಲಾಗಿದೆ. ಪ್ರಧಾನಿ ಅವರ ಸ್ವಾಗತದ ಹಿನ್ನೆಲೆ ಕಾರ್ಮಿಕರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಿ ಜಿಲ್ಲಾ ವೈದ್ಯರ ತಂಡ ಕೋವಿಡ್ 19 ಟೆಸ್ಟ್ ಮಾಡಿದ್ದಾರೆ.
ಪ್ರಧಾನಿ ಸ್ವಾಗತಕ್ಕೆ ಬೆಳಗಾವಿ ಕೇಸರಿಮಯವಾಗಿದೆ: ದೇಶದ ಪ್ರಧಾನಿ ನರೇಂದ್ರ ಮೋದಿಯವರು ಬೆಳಗಾವಿಗೆ ಆಗಮಿಸುತ್ತಿದ್ದಂತೆ ಬೆಳಗಾವಿ ನಗರ ಸಂಪೂರ್ಣ ಚಿತ್ರವೇ ಬದಲಾಗಿದೆ. ಹಾಳಾದ ರಸ್ತೆ ಬಣ್ಣ ಕಳೆದುಕೊಂಡ ತಡೆಗೋಡೆಗಳು, ಮರು ನಿರ್ಮಾಣಗೊಂಡು ಕಂಗೊಳಿಸುತ್ತಿವೆ. ನಗರದ ತಂಬೆಲ್ಲಾ ಬಿಜೆಪಿ ಪಕ್ಷದ ಧ್ವಜ ಹಾಗೂ ಕೇಸರಿ ಬಣ್ಣದ ಬಟ್ಟೆಯಿಂದ ದಾರಿ ಉದ್ದಕ್ಕೂ ಶೃಂಗಾರ ಮಾಡಲಾಗಿದೆ. ಕಿತ್ತೂರು ಚೆನ್ನಮ್ಮ ವೃತ್ತದಿಂದ ನಗರದ ಹಲವು ರಸ್ತೆಗಳು ಕಂಗೊಳಿಸುತ್ತಿವೆ.
50 ಎಕರೆ ಪ್ರದೇಶದಲ್ಲಿ ಬೃಹತ್ತಾದ ವೇದಿಕೆ ನಿರ್ಮಾಣ : ಬಿ ಎಸ್ ಯಡಿಯೂರಪ್ಪ ಮಾರ್ಗದ ಮಾಲಿನಿ ಸಿಟಿಯಲ್ಲಿ ಬೃಹತ್ ಪೆಂಡಾಲ್ ನಿರ್ಮಾಣ ಮಾಡಲಾಗಿದೆ. 2 ಲಕ್ಷ ಜನರಿಗೆ ಆಸನದ ವ್ಯವಸ್ಥೆ ಜೊತೆಗೆ ಮೂರು ಕಡೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ವಾಹನ ನಿಲುಗಡೆ ಸ್ಥಳದಲ್ಲೇ ಆಗಮಿಸುವ ಜನರಿಗಾಗಿ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಬೆಳಗಾವಿ ಜಿಲ್ಲೆಯ ವಿವಿಧ ಕಡೆಗಳಿಂದ ಫಲಾನುಭವಿಗಳು, ಬಿಜೆಪಿ ಕಾರ್ಯಕರ್ತರು ಆಗಮಿಸಲು 1500 ಬಸ್ ವ್ಯವಸ್ಥೆ ಮಾಡಲಾಗಿದೆ.
ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ : ಪ್ರಧಾನಿ ನರೇಂದ್ರ ಮೋದಿ ಅವರು ಪಿಎಂ ಕಿಸಾನ್ ಸನ್ಮಾನ್ ಯೋಜನೆಯಲ್ಲಿ ದೇಶದ 8 ಸಾವಿರ ರೈತರಿಗೆ 16 ಸಾವಿರ ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಲಿದ್ದಾರೆ. ಜೊತೆಗೆ 190 ಕೋಟಿ ರೂಪಾಯಿ ವೆಚ್ಚದಲ್ಲಿ ನವೀಕರಣ ಮಾಡಿದ ಬೆಳಗಾವಿ ರೈಲು ನಿಲ್ದಾಣ ಉದ್ಘಾಟನೆ ಸಮಾರಂಭ ನಡೆಯಲಿದೆ ಹಾಗೂ 1098 ಕೋಟಿ ವೆಚ್ಚದ ಜಲಜೀವನ ಮಿಷನ್ ಕಾಮಗಾರಿಗೆ ಲೋಕಾರ್ಪಣೆ ಸಲ್ಲಿಸಲಿದ್ದಾರೆ. ಜಿಲ್ಲೆಯ 1132 ಕೋಟಿ ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಶಂಕುಸ್ಥಾಪನೆ. ಬೆಳಗಾವಿ- ಧಾರವಾಡ ನೇರ ರೈಲು ಮಾರ್ಗದ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ಒಟ್ಟು 2,250 ಕೋಟಿ ವೆಚ್ಚದ ಕಾರ್ಯಕ್ರಮಗಳ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ.
12.5 ಲಕ್ಷ ಹೊಲಿಗೆಯಿಂದ ತಯಾರಾದ ಮೋದಿ ಅವರ ಭಾವಚಿತ್ರ: ಮೋದಿ ಅವರಿಗೆ ಉಡುಗೊರೆಯಾಗಿ ನೀಡಲು ಟೈಲರ್ ಓರ್ವರು ಹನ್ನೆರಡುವರೆ ಲಕ್ಷ ಹೊಲಿಗೆಯಿಂದ ಎಸ್ಕೆ ಕಡಕೆ ದರ್ಜಿ ಮೋದಿ ಅವರ ಭಾವಚಿತ್ರ ನಿರ್ಮಾಣ ಮಾಡಿಸಿದ್ದಾರೆ. ಕಳೆದ ಒಂದು ತಿಂಗಳಿನಿಂದ ನಿರಂತರ ಕೆಲಸ ಮಾಡಿ ಭಾವಚಿತ್ರ ನಿರ್ಮಾಣ ಮಾಡಿದ್ದಾರೆ. ಮೋದಿಯವರಿಗೆ ಹಸ್ತಾಂತರಿಸಲು ರಮೇಶ್ ಜಾರಕಿಹೊಳಿ ಅವರ ಸಹಾಯ ಕೇಳಿದ್ದಾರೆ.
ಪಿಯುಸಿ ಪ್ರಥಮ ವರ್ಷದ ವಾರ್ಷಿಕ ಪರೀಕ್ಷೆ ಮುಂದೂಡಿಕೆ: ಬೆಳಗಾವಿಗೆ ನಾಳೆ ಪ್ರಧಾನಿ ಮೋದಿ ಭೇಟಿ ಹಿನ್ನೆಲೆ ಪಿಯುಸಿ ಪ್ರಥಮ ವರ್ಷದ ವಾರ್ಷಿಕ ಪರೀಕ್ಷೆ ಮುಂದೂಡಿದ ಪದವಿಪೂರ್ವ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಬೆಳಗಾವಿ ಜಿಲ್ಲೆಯಲ್ಲಿ ಅನುದಾನಿತ, ಅನುದಾನ ರಹಿತ ಕಾಲೇಜುಗಳಿಗೆ ಸೂಚನೆ ನೀಡಿದೆ. ಫೆ. 27ರಂದು ನಡೆಯುವ ಪರೀಕ್ಷೆಯನ್ನ ಮಾರ್ಚ್ 6ರಂದು ನಡೆಸುವಂತೆ ಸೂಚನೆ ನೀಡಿದ್ದಾರೆ.
ಬೆಳಗಾವಿ ಜಿಲ್ಲೆ ಪಿಯು ಕಾಲೇಜುಗಳಿಗೆ ಈ ಆದೇಶ ಅನ್ವಯವಾಗಲಿದೆ. ಬಸ್ ಸಂಚಾರ ವ್ಯತ್ಯಯ, ನಗರದಲ್ಲಿ ಎಲ್ಲೆಂದರಲ್ಲಿ ರೂಟ್ ಬದಲಾವಣೆ ಸೇರಿ ಸಕಾಲದಲ್ಲಿ ವಿದ್ಯಾರ್ಥಿಗಳು ಕಾಲೇಜಿಗೆ ಮುಟ್ಟಲು ಆಗುವುದಿಲ್ಲ ಎಂದು ಪರೀಕ್ಷೆ ಮುಂದೂಡಲಾಗಿದೆ.
ಪ್ರಧಾನಿಯವರ ವೇದಿಕೆಯಲ್ಲಿ ಬೆಳಗಾವಿ ಜಿಲ್ಲೆಯ ನಾಯಕರಿಗೂ ಸ್ಥಾನ: ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ್ ಕಾರಜೋಳ, ಬೆಳಗಾವಿಯ ಸಂಸದರು, ಶಾಸಕರಿಗೆ ವೇದಿಕೆಯ ಮೇಲೆ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ.
ಬೃಹತ್ ರೋಡ್ ಶೋ: ಪ್ರಧಾನಿಯವರು ಶಿವಮೊಗ್ಗದಲ್ಲಿ ನಾಳೆ ನೂತನ ವಿಮಾನ ನಿಲ್ದಾಣ ಉದ್ಘಾಟಿಸಿ ಬಳಿಕ 2 ಗಂಟೆಗೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬರಲಿದ್ದಾರೆ. ನಂತರ ಅಲ್ಲಿಂದ ಹೆಲಿಕ್ಯಾಪ್ಟರ್ ಮೂಲಕ ಕೆಎಸ್ಆರ್ಪಿ ಮೈದಾನಕ್ಕೆ ಬಂದಿಳಿದು ಚೆನ್ನಮ್ಮ ಸರ್ಕಲ್ನಿಂದ ಬೃಹತ್ ರೋಡ್ ಶೋ ನಡೆಸಲಿದ್ದಾರೆ. ಜೊತೆಗೆ ವಿವಿಧ ಕಾಮಗಾರಿಗಳ ಭೂಮಿ ಪೂಜೆ ಹಾಗೂ ಉದ್ಘಾಟನೆ ಸಮಾರಂಭಕ್ಕೆ ಚಾಲನೆ ನೀಡಲಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾಹಿತಿ ನೀಡಿದರು.
ಪ್ರಧಾನಿ ನರೇಂದ್ರ ಮೋದಿ ಆಗಮನ ಹಿನ್ನೆಲೆ ಪೂರ್ವ ಸಿದ್ಧತೆ ಪರಿಶೀಲಿಸಿದ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. ಚನ್ನಮ್ಮ ವೃತ್ತದಿಂದ ಯಡಿಯೂರಪ್ಪನ ಮಾರ್ಗವರೆಗೆ ಸುಮಾರು 10 ಕಿ.ಮೀ ರೋಡ್ ಶೋ ನಡೆಸಲಿದ್ದಾರೆ. ಈ ವೇಳೆ ಎಂಟು ಸ್ಥಳಗಳಲ್ಲಿ ಜನರಿಗೆ ನಿಲ್ಲುವುದಕ್ಕೆ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಇದನ್ನೂ ಓದಿ : 'ಸಿದ್ದರಾಮಯ್ಯ ಹೇಳಿದ ಸುಳ್ಳು ಒಂದೊಂದಾಗಿ ಹೊರಬರುತ್ತಿದೆ': ಸಿಎಂ ಬೊಮ್ಮಾಯಿ