ಬೆಳಗಾವಿ: ಡಿ.4 ರಿಂದ ಚಳಿಗಾಲದ ಅಧಿವೇಶನ ಆರಂಭವಾಗುತ್ತಿರುವ ಹಿನ್ನೆಲೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಭರದ ಸಿದ್ಧತೆ ನಡೆಯುತ್ತಿದೆ. ಸೌಧದ ಸ್ವಚ್ಛತೆ ಸೇರಿ ಇನ್ನಿತರ ಕಾರ್ಯಗಳಲ್ಲಿ ಸಿಬ್ಬಂದಿ ಮಗ್ನರಾಗಿದ್ದಾರೆ. ಹೌದು, ಹತ್ತು ದಿನಗಳ ಚಳಿಗಾಲ ಅಧಿವೇಶನಕ್ಕೆ ಸುವರ್ಣ ವಿಧಾನಸೌಧ ಸರ್ವ ರೀತಿಯಲ್ಲೂ ಸನ್ನದ್ಧವಾಗುತ್ತಿದೆ.
![Preparation in suvarna vidhana soudha for winter session](https://etvbharatimages.akamaized.net/etvbharat/prod-images/25-11-2023/bgm-suvarnsoudhswatchata-news_25112023161700_2511f_1700909220_697.jpg)
ಅಧಿವೇಶನದ ಹಿನ್ನೆಲೆ ಸುವರ್ಣ ಸೌಧ ಮದುವಣಗಿತ್ತಿಯಂತೆ ಶೃಂಗಾರಗೊಳ್ಳುತ್ತಿದೆ. ಸೌಧದ ಪ್ರವೇಶ ದ್ವಾರಗಳ ಕಂಬಗಳು ಮತ್ತು ಒಳ ಛಾವಣಿಗೆ ಬಣ್ಣವನ್ನೂ ಬಳಿಯಲಾಗುತ್ತಿದೆ. ಇನ್ನು ವಿಧಾನಸಭೆ ಮತ್ತು ವಿಧಾನ ಪರಿಷತ್ ಸಭಾಂಗಣ, ಮುಖ್ಯಮಂತ್ರಿ, ಸಚಿವರು ಹಾಗೂ ಅಧಿಕಾರಿಗಳ ಕಚೇರಿ, ಸೌಧದ ಮೆಟ್ಟಿಲುಗಳು ಸೇರಿ ಇಡೀ ಸೌಧವನ್ನು ಸಿಬ್ಬಂದಿ ಸ್ವಚ್ಛಗೊಳಿಸುತ್ತಿದ್ದಾರೆ.
![Preparation in suvarna vidhana soudha for winter session](https://etvbharatimages.akamaized.net/etvbharat/prod-images/25-11-2023/bgm-suvarnsoudhswatchata-news_25112023161700_2511f_1700909220_318.jpg)
ಗಮನ ಸೆಳೆಯುತ್ತಿರುವ ಅಲಂಕಾರಿಕ ಹೂವಿನ ಸಸಿಗಳು: ಸುವರ್ಣ ವಿಧಾನಸೌಧಕ್ಕೆ ತೆರಳುವ ರಸ್ತೆಯ ವಿಭಜಕದಲ್ಲಿ ಅಲಂಕಾರಿಕ ಹೂವಿನ ಸಸಿಗಳನ್ನು ನೆಡಲಾಗುತ್ತಿದೆ. ಜಿನಿಯಾ, ಸಲಿಯಾ, ಪಿಂಟುನಿಯಾ, ಅಪೇಲಿಯಾ ಸೇರಿ ಮತ್ತಿತರ ಅಲಂಕಾರಿಕ ಹೂವುಗಳು ಸೌಧದ ಮೆರಗನ್ನು ಹೆಚ್ಚಿಸಲಿವೆ. ಇನ್ನು ಸುವರ್ಣಸೌಧ ಆವರಣದಲ್ಲಿ ನಿರ್ಮಿಸಿರುವ ಹೆಲಿಪ್ಯಾಡ್ ನಿಂದ ಸೌಧಕ್ಕೆ ಹೋಗಲು ಹೊಸದಾಗಿ ರಸ್ತೆ ಸಂಪರ್ಕ ಕಲ್ಪಿಸಲಾಗುತ್ತಿದೆ. ಅಲ್ಲದೇ ಸೌಧದ ಸುತ್ತಲೂ ಬೆಳೆದಿದ್ದ ಹುಲ್ಲು, ಕಸ, ಮುಳ್ಳನ್ನು ತೆರವುಗೊಳಿಸಲಾಗುತ್ತಿದೆ. ಒಟ್ಟಾರೆ ಅಧಿವೇಶನ ಸುಸೂತ್ರವಾಗಿ ನಡೆಸಲು ಜಿಲ್ಲಾಡಳಿತ ಮತ್ತು ಸಿಬ್ಬಂದಿ ಅವಿರತವಾಗಿ ಶ್ರಮಿಸುತ್ತಿದ್ದಾರೆ.
![Preparation in suvarna vidhana soudha for winter session](https://etvbharatimages.akamaized.net/etvbharat/prod-images/25-11-2023/bgm-suvarnsoudhswatchata-news_25112023161700_2511f_1700909220_953.jpg)
ಇದನ್ನೂ ಓದಿ: ಕಳಸಾ ಬಂಡೂರಿ, ಮಹದಾಯಿ ಯೋಜನೆ ಜಾರಿ ಮಾಡಿ: ಕೇಂದ್ರ ಸಚಿವ ಜೋಶಿಗೆ ರೈತರ ಮನವಿ
ಹುಲ್ಲನ್ನು ಜೆಸಿಬಿಯಿಂದ ನಾಶ ಪಡಿಸಿದ್ದಕ್ಕೆ ಅನ್ನದಾತರ ಆಕ್ರೋಶ: ಚಳಿಗಾಲದ ಅಧಿವೇಶನ ಆರಂಭವಾಗುತ್ತಿರುವ ಹಿನ್ನೆಲೆ ಸ್ವಚ್ಛತೆ ಹೆಸರಿನಲ್ಲಿ ಸುವರ್ಣ ವಿಧಾನಸೌಧ ಸುತ್ತಲೂ 10 ಏಕರೆಗೂ ಹೆಚ್ಚು ಪ್ರದೇಶದಲ್ಲಿ ಬೆಳೆದಿದ್ದ ಹುಲ್ಲನ್ನು ಜೆಸಿಬಿಗಳ ಮೂಲಕ ತೆಗೆಯಲಾಗಿತ್ತು. ಇದು ಹಲಗಾ, ಬಸ್ತವಾಡ, ಅಲಾರವಾಡ, ಕೊಂಡಸಕೊಪ್ಪ ಸೇರಿ ಸುತ್ತಲಿನ ಗ್ರಾಮಗಳ ರೈತರ ಆಕ್ರೋಶಕ್ಕೆ ಕಾರಣವಾಗಿತ್ತು. ಹಸಿರು ಹುಲ್ಲು ಇದ್ದಾಗಲೇ ಕಟಾವು ಮಾಡಿಕೊಳ್ಳಲು ಅನುಮತಿ ನೀಡುವಂತೆ ನಾವು ಮನವಿ ಮಾಡಿಕೊಂಡಿದ್ದೆವು. ಆದರೆ, ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು, ಜಿಲ್ಲಾಡಳಿತ ಸೊಪ್ಪು ಹಾಕಿಲ್ಲ ಎಂದು ರೈತರು ಆರೋಪಿಸಿದ್ದರು.
ರೈತ ಮುಖಂಡ ಪ್ರಕಾಶ ನಾಯಿಕ ಈಟಿವಿ ಭಾರತ ಜೊತೆಗೆ ಮಾತನಾಡಿ, 'ಮೂಕ ಪ್ರಾಣಿಗಳಿಗೆ ಆಹಾರ ಆಗಬೇಕಿದ್ದ ಮೇವನ್ನು ಹಾಳು ಮಾಡುತ್ತಿರುವುದು ನೋಡಿ ದುಃಖವಾಗುತ್ತಿದೆ. ಜಿಲ್ಲಾಡಳಿತ ಇನ್ನಾದರೂ ಎಚ್ಚೆತ್ತುಕೊಂಡು ಮೇವನ್ನು ರೈತರ ಜಾನುವಾರುಗಳಿಗೆ ನೀಡಬೇಕು' ಎಂದು ಆಗ್ರಹಿಸಿದ್ದರು.
ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರನ್ನು ಈಟಿವಿ ಭಾರತ ಸಂಪರ್ಕಿಸಿದಾಗ, 'ಅಧಿವೇಶನ ಹಿನ್ನೆಲೆ ಸ್ವಚ್ಛತೆ ಕೈಗೊಳ್ಳಲಾಗಿದ್ದು, ಹುಲ್ಲು ಯಾರಿಗಾದರೂ ಬೇಕಾಗಿದ್ದರೆ ಬಂದು ತೆಗೆದುಕೊಂಡು ಹೋಗಬಹುದು. ಇದಕ್ಕೆ ಯಾವುದೇ ಅಭ್ಯಂತರ ಇಲ್ಲ' ಎಂದಿದ್ದರು.