ಚಿಕ್ಕೋಡಿ(ಬೆಳಗಾವಿ): ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ನಿರ್ಮಾಣವಾಗಿ ಕೇವಲ ಇಪ್ಪತ್ತೇ ವರ್ಷ ಪೂರೈಸಿದ್ದ ಕುಡಿಯುವ ನೀರಿನ ಬೃಹತ್ ಟ್ಯಾಂಕ್ ಕುಸಿದಿರುವ ಘಟನೆ ನಡೆದಿದೆ.
1998-99ರಲ್ಲಿ ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸುವಾಗಲೇ ಕಾಮಗಾರಿಯ ಬಗ್ಗೆ ಅನುಮಾನಿಸಿ ಗುತ್ತಿಗೆದಾರರು ಹಾಗೂ ಪಂಚಾಯತ್‌ನ ಗಮನಕ್ಕೆ ತರಲಾಗಿತ್ತು. ಆದರೆ, ಗುತ್ತಿಗೆದಾರರು ತರಾತುರಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ 2001ರಲ್ಲಿ ಟ್ಯಾಂಕಿನ ಮುಖಾಂತರ ನೀರು ಸರಬರಾಜು ಪ್ರಾರಂಭಿಸಿದರು. ಈಗ ಕೇವಲ 20 ವರ್ಷಗಳಲ್ಲಿಯೇ ಟ್ಯಾಂಕ್ ಕುಸಿಯುತ್ತಿದ್ದು, ಗ್ರಾಮದ ಜನತೆಗೆ ಕುಡಿಯುವ ನೀರಿನ ತೊಂದರೆ ಉಂಟಾಗಿದೆ ಎಂದು ಶಿರಗುಪ್ಪಿ ಗ್ರಾಮ ಪಂಚಾಯತ್ ಅಧ್ಯಕ್ಷ ಇಕ್ಬಾಲ್ ಕನವಾಡೆ ಆರೋಪಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ವಿಶ್ವ ಬ್ಯಾಂಕ್ ಯೋಜನೆ ಅಡಿ ಜಿಲ್ಲೆಯ ಬಹುತೇಕ ಗ್ರಾಮಗಳಿಗೆ ಕುಡಿಯುವ ನೀರನ್ನು ಸರಬರಾಜು ಮಾಡುವುದಕ್ಕೋಸ್ಕರ ನೀರಿನ ಟ್ಯಾಂಕ್ ನಿರ್ಮಿಸಲಾಗಿತ್ತು. ಆದರೆ, ಅದೀಗ ಶಿಥಿಲಗೊಂಡಿದ್ದು, ಅಪ್ರಯೋಜಕವಾಗಿದೆ. ಈ ಬಗ್ಗೆ ನಾವು 2016ರಿಂದಲೇ ಸರ್ಕಾರಕ್ಕೆ ಹಾಗೂ ಅಧಿಕಾರಿಗಳಿಗೆ ಸಾಕಷ್ಟು ಸಲ ಮನವಿ ಮಾಡಿಕೊಂಡರು ಪ್ರಯೋಜನವಾಗಿಲ್ಲ. ಸುತ್ತಮುತ್ತಲಿನ 10ಕ್ಕೂ ಹೆಚ್ಚು ಗ್ರಾಮಗಳ ಗ್ರಾಮಸ್ಥರು ಶುದ್ಧ ಕುಡಿಯುವ ನೀರಿಗಾಗಿ ಶಿರಗುಪ್ಪಿಯನ್ನೇ ಅವಲಂಬಿಸಿದ್ದು, ಸಂಬಂಧಪಟ್ಟವರು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ.