ಚಿಕ್ಕೋಡಿ: ದೇವರಿಗೆ ಹರಕೆ ಹೊತ್ತುಕೊಂಡು ಹುಟ್ಟಿದ ಇದ್ದೊಬ್ಬ ಮಗ ಇದೀಗ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾನೆ. ಇದರಿಂದ ಆತಂಕಗೊಂಡಿರುವ ಬಡ ಕುಟುಂಬವೊಂದು ಪುತ್ರನ ಚಿಕಿತ್ಸೆಗಾಗಿ ದಾನಿಗಳಿಂದ ಆರ್ಥಿಕ ಸಹಾಯಕ್ಕಾಗಿ ಮೊರೆ ಇಡುತ್ತಿದೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಾರಾಪೂರ ಗ್ರಾಮದ ಸಿದ್ದಪ್ಪ ಮದಕರಿ ಹಾಗೂ ಬಸವ್ವ ಮದಕರಿ ದಂಪತಿಯ 25 ವರ್ಷದ ಮಗ ಪುಂಡಲಿಕ ಸಿದ್ದಪ್ಪ ಮದಕರಿ ಎಂಬಾತ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾನೆ. ಮೊದಲೇ ಬಡತನದಿಂದ ಜೀವನ ಸಾಗಿಸುತ್ತಿರುವ ಕುಟುಂಬಕ್ಕೆ ಮಗನ ಆರೋಗ್ಯ ಸಮಸ್ಯೆಯು ಮತ್ತಷ್ಟು ಹೈರಾಣಾಗಿಸಿದೆ.
ಪುಂಡಲಿಕನ ಚಿಕಿತ್ಸೆಗೆ ಕುಟುಂಬಸ್ಥರು ಈಗಾಗಲೇ ಸುಮಾರು 7 ಲಕ್ಷ ರೂ.ಗೂ ಅಧಿಕ ಹಣ ಖರ್ಚು ಮಾಡಿ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದಾರೆ. ಕೆಲಸ ಮಾಡುತ್ತಿದ್ದ ಒಂದು ಕಿಡ್ನಿ ಕಳೆದ ಎಂಟು ತಿಂಗಳಿಂದ ವಿಫಲಗೊಂಡಿದೆ. ಹೀಗಾಗಿ ಪ್ರತಿ ವಾರಕ್ಕೆ ಕನಿಷ್ಠ ಎರಡು ಬಾರಿಯಾದರೂ ಡಯಾಲಿಸಸ್ ಹಾಗೂ ಇತರೆ ಚಿಕಿತ್ಸೆ ನೀಡಲೇಬೇಕಾದ ತುರ್ತು ಇದೆ.
ಈ ನಡುವೆ ನಿಷ್ಕ್ರಿಯಗೊಂಡಿರುವ ಕಿಡ್ನಿ ತೆಗೆದು ಹೊಸ ಕಿಡ್ನಿ ಹಾಕಿಸುವಂತೆ ಕುಟುಂಬಕ್ಕೆ ವೈದ್ಯರು ಸಲಹೆ ನೀಡಿದ್ದಾರೆ. ಇದಕ್ಕಾಗಿ ಮದಕರಿ ಕುಟುಂಬ ಸುಮಾರು 15 ಲಕ್ಷ ರೂ ಹಣ ಹೊಂದಿಸಬೇಕಿದೆ. ಇದರಿಂದ ಚಿಂತೆಗೀಡಾಗಿರುವ ಕುಟುಂಬ, ಮಗನಿಗೆ ಅಗತ್ಯ ಚಿಕಿತ್ಸೆ ಕೊಡಿಸಲು ಸಾರ್ವಜನಿಕರು ಧನಸಹಾಯ ಮಾಡುವಂತೆ ಅಂಗಲಾಚಿದೆ.
ಇವರಿಗೆ ಆರ್ಥಿಕ ಸಹಾಯ ಮಾಡಬಯಸುವವರು ನೇರವಾಗಿ ಬಂದು ಹಣ ನೀಡಬಹುದು ಅಥವಾ ಪಂಡಲಿಕನ ಕುಟುಂಬವನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಬ್ಯಾಂಕ್ ಅಕೌಂಟ್ಗೆ ಹಣ ಸಂದಾಯ ಮಾಡಬಹುದು. ಪುಂಡಲಿಕನ ಬ್ಯಾಂಕ್ ಖಾತೆಯ ವಿವರವನ್ನು ಕೆಳಗೆ ನೀಡಲಾಗಿದೆ.
ಬ್ಯಾಂಕ್ ಖಾತೆ ನಂ: 5102010221986
IFSC Code: UBIN0537519
ದೂರವಾಣಿ ಸಂಖ್ಯೆ: 9902833050