ಚಿಕ್ಕೋಡಿ: ಮಹಾರಾಷ್ಟ್ರ ಸಚಿವರು ಬೆಳಗಾವಿ ನಗರಕ್ಕೆ ಆಗಮನ ರದ್ದಾಗುತ್ತಿದ್ದಂತೆ, ಇತ್ತ ಕೊಲ್ಲಾಪುರ ಶಿವಸೇನೆ ಜಿಲ್ಲಾಧ್ಯಕ್ಷ ವಿಜಯ್ ದೇವಣೆ ನಿಪ್ಪಾಣಿಯ ಕುಗುನೋಳ್ಳಿ ಗಡಿ ಪ್ರವೇಶಕ್ಕೆ ಕಾರಿನಿಂದ ಇಳಿದು ಓಡೋಡಿ ಕರ್ನಾಟಕ ಗಡಿ ಪ್ರವೇಶಕ್ಕೆ ಯತ್ನಿಸುತ್ತಿದ್ದಂತೆ ಮಹಾರಾಷ್ಟ್ರ ಪೊಲೀಸರು ತಡೆಯೊಡ್ಡಿ ವಶಕ್ಕೆ ಪಡೆದುಕೊಂಡಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ನಿಪ್ಪಾಣಿ ತಾಲೂಕಿನ ಕುಗುನೊಳ್ಳಿ ಚೆಕ್ ಪೋಸ್ಟ್ ಹತ್ತಿರ, ಮಹಾರಾಷ್ಟ್ರ ಶಿವಸೇನೆ ಮುಖಂಡರು ಹಾಗೂ ಕಾರ್ಯಕರ್ತರು ಹೈಡ್ರಾಮಾ ಸೃಷ್ಟಿ ಮಾಡಿದ್ದಾರೆ. ಇವರ ಮೊಂಡಾಟಕ್ಕೆ ಮಹಾರಾಷ್ಟ್ರ ಪೊಲೀಸರು ತಡೆವೊಡ್ಡಿ ವಶಕ್ಕೆ ಪಡೆದುಕೊಂಡಿದ್ದಾರೆ. ಶಿವಸೇನೆ ಕಾರ್ಯಕರ್ತರು ಹಾಗೂ ಮುಖಂಡರನ್ನು ಮಹಾರಾಷ್ಟ್ರ ಪೊಲೀಸರು ವಶಕ್ಕೆ ಪಡೆದಿದ್ದು, ಗಡಿಯಲ್ಲಿ ಸದ್ಯ ಶಾಂತಿಯ ವಾತಾವರಣ ನಿರ್ಮಾಣವಾಗಿದೆ. ಉಭಯ ರಾಜ್ಯಗಳ ವಾಹನ ಸಂಚಾರಕ್ಕೆ ಯಾವುದೇ ತೊಂದರೆ ಆಗಿಲ್ಲ.
ಶಿವಸೇನೆ ತೀವ್ರ ಆಕ್ರೋಶ: ಮಹಾರಾಷ್ಟ್ರ ಸಚಿವರಾದ ಚಂದ್ರಕಾಂತ ಪಾಟೀಲ್, ಶಂಭುರಾಜ್ ದೇಸಾಯಿ ಮತ್ತು ಸಂಸದ ಧೈರ್ಯಶೀಲ ಮಾನೆ ಅವರ ವಿರುದ್ಧ ಶಿವಸೇನೆ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕರ್ನಾಟಕ ಪ್ರವೇಶ ನಿರಾಕರಿಸಿದ ಮುಖಂಡರ ಭಾವಚಿತ್ರವನ್ನು ಹಿಡಿದು ಬಳೆ, ಕುಂಕುಮ ಅರಿಶಿನ, ನೀಡಿ ಎಂದು ಮಹಾ ಸಚಿವರ ವಿರುದ್ಧ ತೀವ್ರ ಅಸಮಾಧಾನ ಹೊರಹಾಕುತ್ತಿದ್ದಾರೆ.
ಪೊಲೀಸ್ ಕಾರ್ಯಾಚರಣೆ ಮುಂದುವರೆಯುತ್ತದೆ: ಮಹಾರಾಷ್ಟ್ರ ಕರ್ನಾಟಕ ಗಡಿ ವಿಚಾರವಾಗಿ, ಕರುನಾಡ ಗಡಿಗಳಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಇನ್ನೂ ಎರಡು ದಿನಗಳ ಕಾಲ ಗಡಿಯಲ್ಲಿ ಪೊಲೀಸ್ ಬಂದೋಸ್ತ್ ಇರಲಿದೆ ಎಂದು ಬೆಳಗಾವಿ ಎಸ್ ಪಿ ಡಾಕ್ಟರ್ ಸಂಜೀವ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.
ಮಹಾರಾಷ್ಟ್ರ ಪೊಲೀಸರಿಂದ ನಿಗಾ: ಅವರು ನಿಪ್ಪಾಣಿ ತಾಲೂಕಿನ ಕಗನೊಳ್ಳಿ ಚೆಕ್ ಪೋಸ್ಟ್ ಭದ್ರತೆ ಪರಿಶೀಲನೆಗೆ ಆಗಮಿಸಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಮಹಾರಾಷ್ಟ್ರ, ಕರ್ನಾಟಕ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ಇಲಾಖೆಯಿಂದ ಭದ್ರತೆ ಒದಗಿಸಲಾಗಿದೆ. ಉಭಯ ರಾಜ್ಯಗಳ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ಮಹಾರಾಷ್ಟ್ರ ಪೊಲೀಸರು ನಿಗಾವಹಿಸಿದ್ದಾರೆ ಎಂದು ತಿಳಿಸಿದರು.
ಆಸ್ತಿಪಾಸ್ತಿಗೆ ಯಾರೂ ಹಾನಿ ಮಾಡಬೇಡಿ: ಮಹಾರಾಷ್ಟ್ರದಲ್ಲಿ ಕೆಲವರು ಪ್ರತಿಭಟನೆಗೆ ಮುಂದಾಗಿದ್ದರು. ಇವರನ್ನು ಮಹಾರಾಷ್ಟ್ರ ಪೊಲೀಸರು ವಶಕ್ಕೆ ತೆಗೆದುಕೊಂಡು ಕಾನೂನು ಕ್ರಮ ಜರುಗಿಸುತ್ತಾರೆ. ಸಾರ್ವಜನಿಕರು ಯಾವುದೇ ಊಹಾಪೋಹಗಳನ್ನು ನಂಬಬೇಡಿ, ಉಭಯ ರಾಜ್ಯಗಳ ಸಂಚಾರ ಸುಗಮವಾಗಿ ಸಾಗುತ್ತಿದೆ. ಸಾರ್ವಜನಿಕ ಮತ್ತು ಸರ್ಕಾರಿ ಆಸ್ತಿಪಾಸ್ತಿಗೆ ಯಾರೂ ಹಾನಿ ಮಾಡಬೇಡಿ ಎಂದು ಮನವಿ ಸಲ್ಲಿಸಿದರು.
ಸಂದರ್ಭಕ್ಕೆ ಅನುಸಾರವಾಗಿ ಗಡಿಯಲ್ಲಿ ಇನ್ನು ಎರಡು ದಿನ ಅಥವಾ ಮುಂದೆ ಬೇಕಾದರೂ ಭದ್ರತೆಯ ಕಾರ್ಯಾಚರಣೆ ಮುಂದುವರಿಸುತ್ತೇವೆ ಎಂದು ಬೆಳಗಾವಿ ಎಸ್ ಪಿ ಡಾಕ್ಟರ್ ಸಂಜೀವ ಪಾಟೀಲ್ ನಿಪಾಣಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ಕರ್ನಾಟಕದ ಬಸ್ಗಳಿಗೆ ಕಪ್ಪು ಬಣ್ಣ: ಮಹಾರಾಷ್ಟ್ರದ ಗ್ರಾಮಗಳನ್ನು ಕರ್ನಾಟಕಕ್ಕೆ ಸೇರಿಸುವ ನಿರ್ಧಾರದ ಕುರಿತು ಕರ್ನಾಟಕ ಮುಖ್ಯಮಂತ್ರಿ ಬೊಮ್ಮಾಯಿ ನಿರಂತರ ಹೇಳಿಕೆ ನೀಡುತ್ತಿದ್ದಾರೆ. ಈ ಮಧ್ಯೆ ಮಹಾರಾಷ್ಟ್ರದ ಇಬ್ಬರು ಸಚಿವರಿಗೆ ಕರ್ನಾಟಕ ಪ್ರವೇಶಿಸದಂತೆ ನಿರ್ಬಂಧ ಹೇರಿದ ಬೆನ್ನಲ್ಲೇ ಗಡಿ ವಿವಾದ ಬಿಸಿಯಾಗಿದೆ. ಇದೀಗ ಶಿವಸೇನೆ ಕಾರ್ಯಕರ್ತರು ಪುಣೆಯಲ್ಲಿ ಕರ್ನಾಟಕದ ಬಸ್ಗಳಿಗೆ ಕಪ್ಪು ಬಣ್ಣವನ್ನು ಬಳಿದು ಪ್ರತಿಭಟಿಸಿದ್ದಾರೆ.
ಓದಿ: ಕನ್ನಡ ನೆಲದಲ್ಲಿ ನಾಡದ್ರೋಹಿ ಘೋಷಣೆ: ಎಂಇಎಸ್ ಕಾರ್ಯಕರ್ತರು ಪೊಲೀಸ್ ವಶಕ್ಕೆ