ಬೆಳಗಾವಿ : ಇಲ್ಲಿನ ಖಾಸ್‍ಬಾಗ್‍ನಲ್ಲಿರುವ ಮಹಾನಗರ ಪಾಲಿಕೆ ವ್ಯಾಪ್ತಿಯ ನಿರಾಶ್ರಿತ ಕೇಂದ್ರದಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಜಗದೀಶ್ ಕೆ ಹೆಚ್ ಚಾಲನೆ ನೀಡಿದರು.
ಈ ವೇಳೆ ನಿರಾಶ್ರಿತ ಕೇಂದ್ರವನ್ನು ಪರಿಶೀಲನೆ ನಡೆಸಿ, ನಿರಾಶ್ರಿತರಿಗೆ ಯಾವ ರೀತಿ ವ್ಯವಸ್ಥೆ ಮಾಡಲಾಗಿದೆ ಎಂಬುವುದರ ಕುರಿತು ಕೇಂದ್ರದ ವ್ಯವಸ್ಥಾಪಕ ಶಂಕರ್ ಮಾಳೇದಾರ್ ಅವರಿಂದ ಮಾಹಿತಿ ಪಡೆದುಕೊಂಡರು. ಬಳಿಕ ಮಾತನಾಡಿದ ಪಾಲಿಕೆ ಆಯುಕ್ತ ಜಗದೀಶ್, ಸಸಿಗಳನ್ನು ಪೋಷಿಸಿ ಬೆಳೆಸುವುದರಿಂದ ಪರಿಸರ ಚೆನ್ನಾಗಿ ಉಳಿಯುತ್ತದೆ. ಇದರಿಂದ ನೆರೆ ಪ್ರವಾಹ ಪರಿಸ್ಥಿತಿ ಹಾಗೂ ಮಳೆಯ ಅಭಾವ ಕಡಿಮೆ ಸೇರಿ ಇನ್ನಿತರ ಸಮಸ್ಯೆಗಳು ನಮ್ಮಿಂದ ದೂರಾಗಲಿವೆ. ಹೀಗಾಗಿ ಪ್ರತಿಯೊಬ್ಬರು ಸಸಿ ನೆಡುವ ಮೂಲಕ ಪರಿಸರ ರಕ್ಷಣೆಗೆ ಮುಂದಾಗಬೇಕು ಎಂದು ಮನವಿ ಮಾಡಿದರು.
ಇದಲ್ಲದೇ ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿನ್ನೆಯವರೆಗೆ ಒಟ್ಟು 18 ಕೊರೊನಾ ಕೇಸ್ ಕಂಡು ಬಂದಿವೆ. ನಗರದಲ್ಲಿ 10 ಕಂಟೇನ್ಮೆಂಟ್ ಪ್ರದೇಶಗಳನ್ನು ಘೋಷಣೆ ಮಾಡಲಾಗಿದೆ. ಸೋಂಕು ತಡೆಗಟ್ಟುವ ಉದ್ದೇಶದಿಂದ ಪ್ರತಿ ಭಾನುವಾರ ಸರ್ಕಾರ ಲಾಕ್‍ಡೌನ್ ಘೋಷಣೆ ಮಾಡಿದ್ದು, ಅದನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು. ಅಗತ್ಯ ಸೇವೆ ಹೊರತುಪಡಿಸಿ ಇನ್ನುಳಿದ ಎಲ್ಲ ಸೇವೆಗಳನ್ನು ಬಂದ್ ಮಾಡಲಾಗುತ್ತದೆ. ಹೀಗಾಗಿ ಎಲ್ಲ ಸಾರ್ವಜನಿಕರು ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಸೋಂಕು ತಡೆಗಟ್ಟಲು ಸಹಕರಿಸಿಬೇಕು ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ವೈದ್ಯಾಧಿಕಾರಿ ಸಂಜಯ ಡುಮಗೋಳ್, ಬೆಳಗಾವಿ ವಿಭಾಗ ಅರಣ್ಯ ವಲಯ ಅಧಿಕಾರಿ ಕಿರಣ್ ಪಾಟೀಲ್, ಆಶಿಶ್‌ಕುಮಾರ್, ನಗರ ವಸತಿ ರಹಿತರ ಆಶ್ರಯ ಕೇಂದ್ರದ ವ್ಯವಸ್ಥಾಪಕ ಶಂಕರ್ ಭೀ ಮಾಳೇದಾರ್, ವೆಂಕಟೇಶ್, ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು.