ಬೆಳಗಾವಿ: ಒಂದೂವರೆ ತಿಂಗಳ ಕಾಲ ಗೃಹವಾಸ ಅನುಭವಿಸಿ ಹೊರ ಬಂದಿರುವ ಜನರಿಗೆ ಇದೀಗ ಪೆಟ್ರೋಲ್ ದರ ಶಾಕ್ ನೀಡಿದೆ. ಕುಂದಾನಗರಿ ಬೆಳಗಾವಿಯಲ್ಲಿಯೂ ಪೆಟ್ರೋಲ್ ದರ ನೂರರ ಗಡಿ ದಾಟಿದೆ.
ಕೊರೊನಾ ವೈರಸ್ ತಡೆಗೆ ರಾಜ್ಯ ಸರ್ಕಾರ ಕಳೆದ ಒಂದೂವರೆ ತಿಂಗಳ ಕಾಲ ವಿಧಿಸಿದ್ದ ಲಾಕ್ ಡೌನ್ ಇಂದಿನಿಂದ ಸಡಿಲಿಕೆಯಾಗಿದೆ. ಲಾಕ್‌ಡೌನ್ ಗೃಹವಾಸ ಅನುಭವಿಸಿ ಹೊರಬಂದು ಖುಷಿಯಲ್ಲಿದ್ದ ಜಿಲ್ಲೆಯ ಜನತೆಗೆ ಪೆಟ್ರೋಲ್ ದರ ನೂರರ ಗಡಿ ದಾಟುವ ಮೂಲಕ ಜನರ ಜೇಬಿಗೆ ಕತ್ತರಿ ಹಾಕಿದೆ.
ಬೆಳಗಾವಿಯಲ್ಲಿ ಪ್ರಕಟವಾದ ಪೆಟ್ರೋಲ್ ದರ ಪಟ್ಟಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 100.28 ರೂ. ಹಾಗೂ ಡಿಸೇಲ್ ದರ 93.12 ರೂ. ಆಗಿದ್ದು, ಇದು ಈವರೆಗಿನ ದಾಖಲೆಯ ಬೆಲೆ ಏರಿಕೆ ಆಗಿದೆ. ಕಳೆದ ಎರಡು ದಿನಗಳ ಹಿಂದೆ ಇದ್ದ ಪೆಟ್ರೋಲ್ ಬೆಲೆ ಇದೀಗ 31 ಪೈಸೆ ಹೆಚ್ಚಾಗುವ ಮೂಲಕ ಶತಕ ಬಾರಿಸಿದೆ.
ಇತ್ತ ಕೆಲಸವಿಲ್ಲದೆ ಮನೆಯಲ್ಲಿ ಒಂದೂವರೆ ತಿಂಗಳ ಕಾಲ ಖಾಲಿ ಕುಳಿತಿದ್ದ ಜನರು ಇನ್ನೇನು ಉದ್ಯೋಗ-ವ್ಯಾಪಾರ ನಡೆಸಲು ಹೊರಬರಬೇಕು ಎನ್ನುವಷ್ಟರಲ್ಲಿಯೇ ಪೆಟ್ರೋಲ್ ದರ ಏರಿಕೆ ಜನರಿಗೆ ಹೆಚ್ಚಿನ ಹೊರೆಯಾಗಿ ಪರಿಣಮಿಸಿದೆ.