ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಪಕ್ಷಕ್ಕಿಂತ ವೈಯಕ್ತಿಕ ಮತ್ತು ಕುಟುಂಬದ ವರ್ಚಸ್ಸು ಚುನಾವಣೆಯಲ್ಲಿ ಬಹಳಷ್ಟು ಕೆಲಸ ಮಾಡುತ್ತದೆ. ಯಾವುದೇ ಪಕ್ಷದಿಂದ ನಿಂತರೂ ಗೆದ್ದು ಬರುವಷ್ಟು ಶಕ್ತಿ ಸಾಮರ್ಥ್ಯ ಇಲ್ಲಿನ ಬಹುತೇಕ ರಾಜಕಾರಣಿಗಳು ಹೊಂದಿದ್ದಾರೆ. ಹೌದು ಜಾರಕಿಹೊಳಿ ಕುಟುಂಬ, ಸವದಿ ಕುಟುಂಬ, ಕತ್ತಿ ಕುಟುಂಬ, ಹುಕ್ಕೇರಿ ಕುಟುಂಬ, ಜೊಲ್ಲೆ ಕುಟುಂಬ - ಹೀಗೆ ಪಕ್ಷಗಳಿಗಿಂತ ಇಲ್ಲಿ ಕುಟುಂಬಗಳ ಮಾತೇ ಹೆಚ್ಚು ನಡೆಯುತ್ತದೆ. ಅಲ್ಲದೇ ಇವರ ಕ್ಷೇತ್ರಗಳ ಮತದಾರ ಪ್ರಭುಗಳು ಪಕ್ಷಕ್ಕಿಂತ ಈ ಕುಟುಂಬಗಳಿಗೆ ಮಣೆ ಹಾಕುತ್ತಾ ಬಂದಿದ್ದಾರೆ.
ಕರದಂಟು ನಾಡಿಗೆ ರಮೇಶ ಸಾಹುಕಾರ ಅಧಿಪತಿ: ಸತತ ಆರು ಬಾರಿ ಗೆದ್ದಿರುವ ರಮೇಶ ಜಾರಕಿಹೊಳಿ ಇದೀಗ ಏಳನೇ ಬಾರಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಐದು ಬಾರಿ ಕಾಂಗ್ರೆಸ್‌ನಿಂದ ಗೆದ್ದಿದ್ದ ಅವರು ಉಪಚುನಾವಣೆಯಲ್ಲಿ ಬಿಜೆಪಿಯಿಂದ ಗೆದ್ದು ಬಂದಿದ್ದಾರೆ. ಪಕ್ಷ ಯಾವುದಾದರೂ ವೈಯಕ್ತಿಕ ವರ್ಚಸ್ಸಿನಿಂದಲೇ ಗೆಲ್ಲುವುದು ರಮೇಶ ಸಾಹುಕಾರಗೆ ಕರಗತ. ಆದರೆ, ಈ ಬಾರಿ ಚಿತ್ರಣ ಸ್ವಲ್ಪ ಬದಲಾಗಿದ್ದು, ಗೋಕಾಕ್ದಲ್ಲಿ ಅತೀ ಹೆಚ್ಚು ಪಂಚಮಸಾಲಿ ಸಮುದಾಯ ಇರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಡಾ. ಮಹಾಂತೇಶ ಕಡಾಡಿಗೆ ಟಿಕೆಟ್ ನೀಡಿದೆ.
ಇದರಿಂದ ಅಸಮಾಧಾನಗೊಂಡಿದ್ದ ಅಶೋಕ ಪೂಜಾರಿ ಬಂಡಾಯ ಶಮನಗೊಳಿಸಲಾಗಿದೆ. ಅಲ್ಲದೇ ಜೆಡಿಎಸ್ ಅಭ್ಯರ್ಥಿ ಚಂದನ ಗಿಡ್ಡನವರ ಕೂಡ ಕಾಂಗ್ರೆಸ್ಗೆ ಬೆಂಬಲ ಘೋಷಿಸಿದೆ. ಇನ್ನು ಅಥಣಿಯಲ್ಲಿ ಲಕ್ಷ್ಮಣ ಸವದಿ ಸೋಲಿಸಲು ಪಣ ತೊಟ್ಟಿರುವ ರಮೇಶ ಜಾರಕಿಹೊಳಿಗೆ ಮೌನ ಕ್ರಾಂತಿ ಹೆಸರಿನಲ್ಲೇ ತಮ್ಮ ಪವರ್ ತೋರಿಸಲು ಸವದಿ ಮುಂದಾಗಿದ್ದಾರೆ. ಅಲ್ಲದೇ ಲಕ್ಷ್ಮೀ ಹೆಬ್ಬಾಳ್ಕರ್ ಜೊತೆಗಿನ ಶತ್ರುತ್ವವೂ ರಮೇಶ ಜಾರಕಿಹೊಳಿ ಗೆಲುವಿಗೆ ಅಡ್ಡಗಾಲು ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇದೆಲ್ಲವನ್ನೂ ಮೀರಿ ಮತ್ತೆ ಸ್ವಂತ ಬಲದ ಮೇಲೆ ರಮೇಶ ಗೆಲ್ಲುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಯಮಕನಮರಡಿಯಲ್ಲಿ ಸತೀಶ ವರ್ಚಸ್ಸು: ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರವಾಗಿರುವ ಯಮಕನಮರಡಿ ವಿಧಾನಸಭೆ ಕ್ಷೇತ್ರ ರಚನೆ ಆದಾಗಿನಿಂದ ಸತತವಾಗಿ ಮೂರು ಬಾರಿ ಸತೀಶ ಜಾರಕಿಹೊಳಿ ಗೆದ್ದಿದ್ದಾರೆ. ಕ್ಷೇತ್ರದಲ್ಲಿ ಪಕ್ಷಕ್ಕಿಂತ ಸತೀಶ ವೈಯಕ್ತಿಕ ವರ್ಚಸ್ಸಿಗೆ ಇಲ್ಲಿನ ಮತದಾರರು ಜೈ ಎನ್ನುತ್ತಾ ಬಂದಿದ್ದಾರೆ. ಈ ಬಾರಿ ಸತೀಶ ಎದುರಾಳಿಯಾಗಿ ಬಿಜೆಪಿ ಅಭ್ಯರ್ಥಿ ಬಸವರಾಜ ಹುಂದ್ರಿ ಕಣದಲ್ಲಿದ್ದರೆ, ಕಳೆದ ಎರಡು ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಮಾರುತಿ ಅಷ್ಟಗಿ ಟಿಕೆಟ್ ಸಿಗದ ಹಿನ್ನೆಲೆ ಜೆಡಿಎಸ್ನಿಂದ ಕಣಕ್ಕಿಳಿದಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ, ಕಿಚ್ಚ ಸುದೀಪ ಸೇರಿ ಮತ್ತಿತರರು ಪ್ರಚಾರ ನಡೆಸಿದ್ದರೂ, ಅಂತಿಮವಾಗಿ ಮತ್ತೆ ಸತೀಶ ಜಾರಕಿಹೊಳಿ ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಏಕೆಂದರೆ ಮಾರುತಿ ಅಷ್ಟಗಿ ಸ್ಪರ್ಧೆಯಿಂದ ಮತ ವಿಭಜನೆಯ ಭಯ ಬಿಜೆಪಿಗಿದೆ.
ಅಥಣಿಯಲ್ಲಿ ಸವದಿ ಸಾಹುಕಾರ ವೈಯಕ್ತಿಕ ಪ್ರಭಾವ: ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸೇರಿರುವ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಕೂಡ ಅಥಣಿಯಲ್ಲಿ ತಮ್ಮದೇ ಆದ ವೈಯಕ್ತಿಕ ವರ್ಚಸ್ಸು ಹೊಂದಿದ್ದಾರೆ. ಸತತ ಮೂರು ಬಾರಿ ಗೆದ್ದಿರುವ ಸವದಿ ಕಳೆದ ಬಾರಿ ಸೋಲು ಕಂಡಿದ್ದರು. ಈಗ ಮತ್ತೆ ಸ್ಪರ್ಧಿಸಿರುವ ಲಕ್ಷ್ಮಣ ಸವದಿ ಹಣಿಯಲು ರಮೇಶ ಜಾರಕಿಹೊಳಿ ಟೊಂಕ ಕಟ್ಟಿ ನಿಂತಿದ್ದು, ಇಡೀ ಬಿಜೆಪಿ ನಾಯಕರೇ ಅಥಣಿ ಟಾರ್ಗೆಟ್ ಮಾಡಿದ್ದಾರೆ. ಶತಾಯಗತಾಯ ಮಹೇಶ ಕುಮಠಳ್ಳಿ ಗೆಲ್ಲಿಸಲೇಬೇಕೆಂದು ಕೇಸರಿ ಪಡೆ ರಣತಂತ್ರ ಹೆಣೆಯುತ್ತಿದೆ. ಈ ನಡುವೆ, ಗೆದ್ದೇ ಗೆಲ್ಲಬೇಕೆಂಬ ಹಠದಲ್ಲಿ ಸವದಿ ತಮ್ಮ ಹೋರಾಟ ಮುಂದುವರಿಸಿದ್ದಾರೆ.
ಹುಕ್ಕೇರಿಯಲ್ಲಿ ಕತ್ತಿ ಕುಟುಂಬದ ಮೇಲುಗೈ: ಒಟ್ಟು ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ದಿ. ಉಮೇಶ ಕತ್ತಿ ಅವರು, ಎರಡು ಬಾರಿ ಜನತಾ ದಳದಿಂದ, ಒಂದು ಬಾರಿ ಜೆಡಿಯು, ಒಂದು ಬಾರಿ ಜೆಡಿಎಸ್, ಮೂರು ಬಾರಿ ಬಿಜೆಪಿಯಿಂದ ಗೆದ್ದು ಬಂದಿದ್ದಾರೆ. ಅಲ್ಲದೇ ಉಮೇಶ ಕತ್ತಿ ರಾಜಕೀಯಕ್ಕೆ ಬರುವುದಕ್ಕಿಂತ ಮೊದಲು ಅವರ ತಂದೆ ವಿಶ್ವನಾಥ ಕತ್ತಿ ಒಂದು ಬಾರಿ ಜನತಾ ಪಕ್ಷದಿಂದ ಗೆದ್ದಿದ್ದರು. ನಂತರ ಅವರು ನಿಧನರಾಗಿದ್ದರು. ಈಗ ಉಮೇಶ ಕತ್ತಿ ಅವರ ಅಗಲಿಕೆಯಿಂದ ಅವರ ಪುತ್ರ ನಿಖಿಲ್ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್ ಹಿರಿಯ ಮುಖಂಡ ಮಾಜಿ ಸಚಿವ ಎ.ಬಿ.ಪಾಟೀಲ ಅವರು ಕಾಂಗ್ರೆಸ್‌ನಿಂದ ಮತ್ತೆ ಸ್ಪರ್ಧಿಸಿದ್ದಾರೆ. ಒಟ್ಟಿನಲ್ಲಿ ಕತ್ತಿ ಕುಟುಂಬದ ಪ್ರಾಬಲ್ಯ ಮತ್ತೆ ಮುಂದುವರಿಯುತ್ತಾ ಅಥವಾ ಎ.ಬಿ.ಪಾಟೀಲರಿಗೆ ಹುಕ್ಕೇರಿ ಮತದಾರ ಪ್ರಭುಗಳು ಮಣೆ ಹಾಕುತ್ತಾರಾ ಎಂಬುದನ್ನು ಚುನಾವಣಾ ಫಲಿತಾಂಶವೇ ಉತ್ತರ ಹೇಳಬೇಕಿದೆ.
ಬೆಳಗಾವಿ ಗ್ರಾಮೀಣಕ್ಕೆ ಲಕ್ಷ್ಮೀ ಅಕ್ಕ: ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕಡಿಮೆ ಸಮಯದಲ್ಲಿ ಪವರ್ ಫುಲ್ ರಾಜಕಾರಣಿಯಾಗಿ ಬೆಳೆದಿದ್ದಾರೆ. ಪಕ್ಷಕ್ಕಿಂತ ವೈಯಕ್ತಿಕವಾಗಿಯೂ ಪ್ರಭಾವ ಬೆಳೆಸಿಕೊಂಡಿರುವ ಲಕ್ಷ್ಮೀ ಹೆಬ್ಬಾಳ್ಕರ್, ಬೆಳಗಾವಿ ಗ್ರಾಮೀಣ ಕ್ಷೇತ್ರದ ಪ್ರತಿ ಮನೆ ಮನೆಗೂ ಚಿರಪರಿಚಿತೆಯಾಗಿದ್ದಾರೆ. ಸ್ವಂತ ಶಕ್ತಿಯ ಜೊತೆಗೆ ಕ್ಷೇತ್ರದಲ್ಲಿ ತಾವು ಕೈಗೊಂಡ ಅಭಿವೃದ್ಧಿ ಪರ್ವ, ಮರಾಠಾ ಸಮಾಜ ಸೇರಿ ಎಲ್ಲ ಸಮಾಜಗಳ ಜೊತೆಗೆ ಅವಿನಾಭಾವ ಸಂಬಂಧ ಹೊಂದಿದ್ದಾರೆ. ಪ್ರತಿ ಹಳ್ಳಿಯಲ್ಲೂ ನಡೆಸಿದ ಅರಿಸಿನ ಕುಂಕುಮ ಕಾರ್ಯಕ್ರಮ, ರಾಜಹಂಸಗಡ ಕೋಟೆ ಮೇಲಿನ ಶಿವಾಜಿ ಮೂರ್ತಿ ಪ್ರತಿಷ್ಠಾಪನೆ ವಿಚಾರಗಳು ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಪ್ಲಸ್ ಆಗುವ ಸಾಧ್ಯತೆ ಹೆಚ್ಚಿದೆ. ಇನ್ನು ಕಳೆದ ಚುನಾವಣೆಯಲ್ಲಿ ಲಕ್ಷ್ಮೀ ಗೆಲುವಿಗೆ ಶ್ರಮಿಸಿದ್ದ ಮಾಜಿ ಸಚಿವ ರಮೇಶ ಜಾರಕಿಹೊಳಿ, ಈ ಬಾರಿ ಸೋಲಿಸಿಯೇ ತೀರುತ್ತೇನೆಂದು ಪಣ ತೊಟ್ಟಿದ್ದಾರೆ. ಹಠಕ್ಕೆ ಬಿದ್ದು ತಮ್ಮ ಶಿಷ್ಯ ನಾಗೇಶ ಮನ್ನೋಳ್ಕರ್ ಗೆ ಬಿಜೆಪಿ ಟಿಕೆಟ್ ಕೊಡಿಸಿದ್ದು ಎಷ್ಟರ ಮಟ್ಟಿಗೆ ಫಲ ನೀಡುತ್ತೆ ಗೊತ್ತಿಲ್ಲ. ರಮೇಶ್ ಜಾರಕಿಹೊಳಿ ಕ್ಷೇತ್ರದಲ್ಲೇ ಬೀಡುಬಿಟ್ಟಿದ್ದು, ಗೆದ್ದೇ ಗೆಲ್ಲುತ್ತೇನೆ ಎಂಬ ಛಲದಲ್ಲಿದ್ದಾರೆ. ಅಂತಿಮ ಫಲಿತಾಂಶಕ್ಕಾಗಿ ಜನ ಮೇ 13ರವರೆಗೂ ಕಾಯಬೇಕಿದೆ.
ಬಾಲಚಂದ್ರ ಜಾರಕಿಹೊಳಿ ವೈಯಕ್ತಿಕ ವರ್ಚಸ್ಸೇ ಜಾಸ್ತಿ: ಅರಭಾವಿ ಕ್ಷೇತ್ರದಲ್ಲಿ 60 ವರ್ಷಗಳಿಂದಲೂ ವಯಕ್ತಿಕ ವರ್ಚಸ್ಸು ಬೇರೂರಿದೆ. ದಿವಂಗತ ವಿ.ಎಸ್. ಕೌಜಲಗಿ ಐದು ಬಾರಿ ತಮ್ಮ ಶಕ್ತಿಯಿಂದಲೇ ಗೆದ್ದಿದ್ದರು. ಈಗ ಸತತ ಐದು ಬಾರಿ ಬಾಲಚಂದ್ರ ಜಾರಕಿಹೊಳಿ ಕೂಡ ವಯಕ್ತಿಕ ವರ್ಚಸ್ಸಿನಿಂದಲೇ ಗೆದ್ದ ಬಂದಿದ್ದು, ಆರನೇ ಬಾರಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಕಾಂಗ್ರೆಸ್‌ನಿಂದ ಅರವಿಂದ ದಳವಾಯಿ, ಕಾಂಗ್ರೆಸ್ ಟಿಕೆಟ್ ಸಿಗದ ಹಿನ್ನೆಲೆ ಬಂಡಾಯ ಅಭ್ಯರ್ಥಿಯಾಗಿ ಸಾಮಾಜಿಕ ಕಾರ್ಯಕರ್ತ ಭೀಮಪ್ಪ ಗಡಾದ ಸ್ಪರ್ಧಿಸಿದ್ದಾರೆ. ಎರಡು ಬಾರಿ ಜೆಡಿಎಸ್ ಪಕ್ಷದಿಂದ ಗೆದ್ದಿದ್ದ ಬಾಲಚಂದ್ರ, ಮೂರು ಬಾರಿ ಬಿಜೆಪಿಯಿಂದ ಶಾಸಕರಾಗಿದ್ದಾರೆ. ಹೀಗಾಗಿ ಅರಭಾವಿ ಕ್ಷೇತ್ರದ ಜನ ಪಕ್ಷಕ್ಕಿಂತ ವ್ಯಕ್ತಿಗೆ ಮನ್ನಣೆ ನೀಡುತ್ತಾ ಬಂದಿದ್ದಾರೆ.
ಚಿಕ್ಕೋಡಿಯಲ್ಲೂ ಹುಕ್ಕೇರಿ ಮನೆತನದ ಪ್ರಾಬಲ್ಯ: ಚಿಕ್ಕೋಡಿ-ಸದಲಗಾ ಕ್ಷೇತ್ರ ಪ್ರಕಾಶ ಹುಕ್ಕೇರಿ ಹಿಡಿತದಲ್ಲಿದ್ದು, ಐದು ಬಾರಿ ಶಾಸಕರಾಗಿ, ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿ, ಒಂದು ಬಾರಿ ಸಂಸದರಾಗಿದ್ದರು. ತಂದೆ ಹಾದಿಯಲ್ಲೇ ಸಾಗುತ್ತಿರುವ ಗಣೇಶ ಹುಕ್ಕೇರಿ ಎರಡು ಬಾರಿ ಗೆಲುವು ಕಂಡಿದ್ದಾರೆ. ಈಗ ಹ್ಯಾಟ್ರಿಕ್ ಗೆಲುವಿನ ವಿಶ್ವಾಸದಲ್ಲಿದ್ದಾರೆ. ಇನ್ನು ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಸಚಿವ, ದಿವಂಗತ ಉಮೇಶ ಕತ್ತಿ ಅವರ ಸಹೋದರ ಮಾಜಿ ಸಂಸದ ರಮೇಶ ಕತ್ತಿ ಸ್ಪರ್ಧಿಸಿದ್ದು, ಗಣೇಶ ಹುಕ್ಕೇರಿಗೆ ಪ್ರಬಲ ಪೈಪೋಟಿ ಎದುರಾಗಿದೆ.
ನಿಪ್ಪಾಣಿಯಲ್ಲಿ ಜೊಲ್ಲೆ ಪ್ರಭಾವಿ: ನಿಪ್ಪಾಣಿ ಕ್ಷೇತ್ರದಲ್ಲಿ ಸಚಿವೆ ಶಶಿಕಲಾ ಜೊಲ್ಲೆ ತಮ್ಮದೇ ಆದ ಭದ್ರಕೋಟೆ ಕಟ್ಟಿಕೊಂಡಿದ್ದು, ಈಗ ಮೂರನೇ ಬಾರಿ ಗೆಲುವಿನ ನಗೆ ಬೀರಲು ಕಸರತ್ತು ನಡೆಸಿದ್ದಾರೆ. ಇದಕ್ಕೆ ಪತಿ ಅಣ್ಣಾ ಸಾಹೇಬ ಜೊಲ್ಲೆ ಬೆಂಬಲವಾಗಿ ನಿಂತಿದ್ದು, ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ. ಇನ್ನು ಕಾಂಗ್ರೆಸ್‌ನಿಂದ ಹಳೆಯ ಹುಲಿ ಕಾಕಾಸಾಹೇಬ ಪಾಟೀಲ ಕಣದಲ್ಲಿದ್ದು, ಎನ್ಸಿಪಿ ಅಭ್ಯರ್ಥಿಯಾಗಿ ರಮೇಶ ಜಾರಕಿಹೊಳಿ ಆಪ್ತ ಉತ್ತಮ ಪಾಟೀಲ ಸ್ಪರ್ಧಿಸಿದ್ದಾರೆ.
ಒಟ್ಟಾರೆ ಬೆಳಗಾವಿ ಜಿಲ್ಲೆಯ ಈ ಎಂಟು ಕ್ಷೇತ್ರಗಳಲ್ಲಿ ವಯಕ್ತಿಕ ವರ್ಚಸ್ಸು ಪ್ರಭಾವಿಯಾಗಿದ್ದು, ಈ ಕುಟುಂಬದವರೇ ಈವರೆಗೂ ಪ್ರಾಬಲ್ಯ ಮೆರೆಯುತ್ತಾ ಬಂದಿದ್ದಾರೆ. ಈ ಬಾರಿಯೂ ಅದು ಮುಂದುವರಿಯುತ್ತಾ ಅಥವಾ ಅವರ ಪಾರುಪತ್ಯಕ್ಕೆ ಇಲ್ಲಿನ ಮತದಾರರು ಇತಿಶ್ರೀ ಹಾಡುತ್ತಾರಾ ಎಂಬುದಕ್ಕೆ ಮೇ 13ರವರೆಗೂ ಕಾಯಬೇಕಿದೆ.
ಇದನ್ನೂ ಓದಿ: ಪ್ರಬಲ ಅಭ್ಯರ್ಥಿಗಳಿಗೆ ತಮ್ಮದೇ ಹೆಸರಿನ ಸ್ಪರ್ಧಿಗಳಿಂದ ಟೆನ್ಷನ್; ರಾಜ್ಯದ 20 ಕ್ಷೇತ್ರಗಳಲ್ಲಿ ಸೇಮ್ ನೇಮ್ ಟ್ರಬಲ್