ಬೆಳಗಾವಿ : ಮಹಾರಾಷ್ಟ್ರದಲ್ಲಿ ಕೋವಿಡ್ ಕೇಸ್ ಹೆಚ್ಚಳಗೊಂಡ ಹಿನ್ನೆಲೆ ಗಡಿ ಜಿಲ್ಲೆಯಲ್ಲಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿ ತೀವ್ರ ತಪಾಸಣೆ ನಡೆಸಲಾಗುತ್ತಿದೆ. ಪರಿಣಾಮ ಪರ್ಯಾಯ ಮಾರ್ಗದಲ್ಲಿ ಮಹಾರಾಷ್ಟ್ರದಿಂದ ಜನರು ರಾಜ್ಯ ಪ್ರವೇಶ ಮಾಡುತ್ತಿದ್ದಾರೆ.
ತಾಲೂಕಿನ ಬಾಚಿ ಗ್ರಾಮದಲ್ಲಿ ಚೆಕ್ ಪೋಸ್ಟ್ ನಿರ್ಮಿಸಿ ತೀವ್ರ ತಪಾಸಣೆ ನಡೆಸಲಾಗುತ್ತಿದೆ. ಹೀಗಾಗಿ, ಸೋನೊಲಿ ಗ್ರಾಮದ ಕಳ್ಳದಾರಿಯ ಮೂಲಕ ಬೆಳಗಾವಿ ನಗರಕ್ಕೆ ಮಹಾರಾಷ್ಟ್ರದ ಜನರು ಆಗಮಿಸುತ್ತಿದ್ದಾರೆ.
ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆ ಚಂದಗಡ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸುವ ಜನರು ಅಗತ್ಯ ವಸ್ತು ಖರೀದಿ, ವ್ಯಾಪಾರ, ವಹಿವಾಟಿಗಾಗಿ ನಿತ್ಯ ಬೆಳಗಾವಿಗೆ ಆಗಮಿಸುತ್ತಿದ್ದಾರೆ. ಇತ್ತ ಕೊಲ್ಲಾಪುರ ನಗರ ದೂರವಾಗುವ ಹಿನ್ನೆಲೆ ಬೆಳಗಾವಿಯನ್ನೇ ಮಹಾರಾಷ್ಟ್ರದ ಚಂದಗಡ ತಾಲೂಕಿನ ಗ್ರಾಮಸ್ಥರು ಅವಲಂಬಿಸಿದ್ದಾರೆ.
ಆದರೆ, ತಾಲೂಕಿನ ಬಾಚಿ ಚೆಕ್‌ಪೋಸ್ಟ್‌ನಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸುತ್ತಿರುವುದರಿಂದ ಮಹಾರಾಷ್ಟ್ರದ ಶಿನೋಳಿ, ಸುರತೆ ಮಾರ್ಗವಾಗಿ ಬೆಳಗಾವಿ ತಾಲೂಕಿನ ಸೋನೋಲಿಗೆ ಎಂಟ್ರಿ ಕೊಡ್ತಿದ್ದಾರೆ.
ಪರ್ಯಾಯ ಮಾರ್ಗದಲ್ಲೂ ಪೊಲೀಸರನ್ನು ನಿಯೋಜನೆ ಮಾಡುವ ಮೂಲಕ ತೀವ್ರ ಕಟ್ಟುನಿಟ್ಟಿನ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಬೇಕು. ಒಂದು ವೇಳೆ ಜಿಲ್ಲಾಡಳಿತ ನಿರ್ಲಕ್ಷ್ಯವಹಿಸಿದ್ರೆ, ಕುಂದಾನಗರಿಗೆ ಮುಂಬರುವ ದಿನಗಳಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುತ್ತಾರೆ ಸಾರ್ವಜನಿಕರು.
ಓದಿ: ಬೊಮ್ಮಾಯಿ ಪೂರ್ಣಾವಧಿ ಪೂರೈಸುವುದಿಲ್ಲ: ಭವಿಷ್ಯ ನುಡಿದ ಮೈಲಾರಲಿಂಗೇಶ್ವರದ ಧರ್ಮಕರ್ತ