ಚಿಕ್ಕೋಡಿ (ಬೆಳಗಾವಿ): ಕೊರೊನಾ ವೈರಸ್ ಹಾವಳಿಯಿಂದ ಕಳೆದೆರಡು ತಿಂಗಳಿನಿಂದ ದೇಶದೆಲ್ಲೆಡೆ ಲಾಕ್ಡೌನ್ ಹೇರಲಾಗಿದೆ. ಈ ಹಿನ್ನೆಲೆ ರಾಜ್ಯದ ಹಲವು ಕಡೆ ಬಡ ವರ್ಗದ ಜನತೆ ಸಂಕಷ್ಟ ಎದುರಿಸುತ್ತಿದ್ದಾರೆ. ಇನ್ನು ಚಿಕ್ಕೋಡಿಯಲ್ಲಿ ನಾಗರಿಕರು ನಮಗೆ ಲಾಕ್ಡೌನ್ ವೇಳೆ ಸರಿಯಾದ ಸೌಲಭ್ಯ ನೀಡಿಲ್ಲ ಅಂತ ಸ್ಥಳೀಯ ಶಾಸಕರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ನಮಗೆ ತಿನ್ನಲು ಅನ್ನದ ಗತಿಯಿಲ್ಲ, ದುಡಿಯಲು ಕೆಲಸವಿಲ್ಲದಂತಹ ಪರಿಸ್ಥಿತಿಯಲ್ಲಿ ನಮ್ಮ ಭಾಗದ ಶಾಸಕರು ನಮ್ಮ ಗ್ರಾಮದ ಕಡೆ ಬಂದು ನೋಡಿಲ್ಲ ಎಂದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಾಗರಮುನ್ನೊಳಿ ಗ್ರಾಮದ ಸಾರ್ವಜನಿಕರು ರಾಯಬಾಗ ಶಾಸಕ ದುರ್ಯೋಧನ ಐಹೊಳೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾಗರಮುನ್ನೊಳಿ ಅಂಬೇಡ್ಕರ್ ಭವನದ ಬಳಿ ಪ್ರತಿಭಟನೆ ನಡೆಸಿದ ಗ್ರಾಮದ ಮಹಿಳೆಯರು, ಶಾಸಕ ದುರ್ಯೋಧನ ಐಹೊಳೆ ವಿರುದ್ಧ ಹಿಡಿಶಾಪ ಹಾಕಿದ್ದಾರೆ. ನಾಗರಮುನ್ನೊಳ್ಳಿ ಗ್ರಾಮದಲ್ಲಿ ಅವರಿಗೆ ಬೇಕಾದ ಕೇವಲ 5-6 ಮನೆಗಳಿಗೆ ಮಾತ್ರ ದಿನಸಿ ಕಿಟ್ ವಿತರಣೆ ಮಾಡಿದ್ದಾರೆ. ಉಳಿದ ಬಡ ಕುಟುಂಬಗಳಿಗೆ ಕೊಡದೆ ನಿರ್ಲಕ್ಷಿಸಿದ್ದಾರೆ ಎಂದು ಅಲ್ಲಿಯ ಜನತೆ ಆರೋಪಿಸಿದ್ದಾರೆ.
ಎಲ್ಲಾ ಕ್ಷೇತ್ರಗಳಲ್ಲಿ ಶಾಸಕರು ದಿನಸಿ ಕಿಟ್ಗಳನ್ನು ವಿತರಣೆ ಮಾಡುತ್ತಿದ್ದಾರೆ. ಆದರೆ ಈ ಭಾಗದ ಶಾಸಕರು ಮಾತ್ರ ನಮ್ಮನ್ನು ಕಡೆಗಣಿಸುತ್ತಿದ್ದಾರೆ ಎಂದು ತಮ್ಮ ಅಳಲು ತೋಡಿಕೊಂಡರು. ಈ ಹಿಂದೆ ಸಹ ಯಾವುದೇ ರೀತಿ ನರೇಗಾ ಯೋಜನೆ ಅಡಿಯಲ್ಲಿ ಕೆಲಸ ಕೊಟ್ಟಿಲ್ಲ. ಈಗ ಲಾಕ್ಡೌನ್ನಲ್ಲಿ ಸಹ ನಮ್ಮನ್ನು ಕಡೆಗಣಿಸುತ್ತಿದ್ದಾರೆ ಎಂದು ಶಾಸಕರ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.