ಬೆಳಗಾವಿ : ನಗರದ ಬೀಮ್ಸ್ ಜಿಲ್ಲಾಸ್ಪತ್ರೆಗೆ ಉಸಿರಾಟದ ತೊಂದರೆಯಿಂದ ಚಿಕಿತ್ಸೆಗೆ ಆಗಮಿಸಿದ್ದ 70 ವರ್ಷದ ವೃದ್ಧೆಯೊಬ್ಬರಿಗೆ ಬೆಡ್ ಸಿಗದೇ ಪರದಾಡಿದ್ದಲ್ಲದೇ ಚಿಕಿತ್ಸೆ ಪಡೆದುಕೊಳ್ಳದೇ ವಾಪಸ್ ಮನೆಗೆ ತೆರಳಿರುವ ಘಟನೆ ನಡೆದಿದೆ.
ತಾಲೂಕಿನ ಕಣಬರಗಿ ಗ್ರಾಮದ 70 ವರ್ಷದ ಸುಶೀಲಾಬಾಯಿ ಕೋಳಿ ಎಂಬ ಮಹಿಳೆ ನಗರದ ಕೆಎಲ್‍ಇ ಸೇರಿದಂತೆ ಎಲ್ಲ ಖಾಸಗಿ ಆಸ್ಪತ್ರೆಗಳಿಗೆ ಅಲೆದು ಕೊನೆಗೆ ಬೀಮ್ಸ್ ಆಸ್ಪತ್ರೆಗೆ ಆಗಮಿಸಿದ್ದಾರೆ.
ಆದ್ರೆ, ಅಜ್ಜಿಯ ಸಂಬಂಧಿಕರು ಬೆಡ್ ಕೊಡಿಸಲು ಎಷ್ಟೇ ಗೋಗರೆದರೂ, ಅಂಗಲಾಚಿದರೂ, ಬಾಯಿ ಬಡಿದುಕೊಂಡರೂ ಚಿಕಿತ್ಸೆಗೆ ಬೆಡ್ ಸಿಗದೇ ಮನೆಯಿಂದ ಬಂದಿರುವ ಆಟೋದಲ್ಲಿ ಮತ್ತೆ ಮನೆಗೆ ಮರಳಿದ್ದಾರೆ.
ಈ ವೇಳೆ ರೋಗಿಯ ಸಂಬಂಧಿ ಯಲ್ಲಪ್ಪ ಕೋಳಿ ಮಾತನಾಡಿ, ಸುಶೀಲಾಬಾಯಿ ಕೋಳಿಗೆ ಉಸಿರಾಟದ ತೊಂದರೆ ಇದ್ದು, ಬೆಳಿಗ್ಗೆಯೇ ಬೀಮ್ಸ್ ಆಸ್ಪತ್ರೆಗೆ ಕರೆ ತಂದಿದ್ದೇವೆ. ತಪಾಸಣೆ ಮಾಡುವಂತೆ ಎಷ್ಟೇ ಕೇಳಿಕೊಂಡರೂ ತಪಾಸಣೆ ಮಾಡುತ್ತಿಲ್ಲ ಎಂದು ಆರೋಪ ಮಾಡಿದ್ದಾರೆ.
ಆದರೆ, ಜಿಲ್ಲಾಡಳಿತ ಮಾತ್ರ ಬೆಳಗಾವಿ ಬೀಮ್ಸ್ ಆಸ್ಪತ್ರೆಯಲ್ಲಿ ಎಲ್ಲ ವ್ಯವಸ್ಥೆಗಳು ಸರಿ ಇವೆ. ಜನಸಾಮಾನ್ಯರ ಆರೋಗ್ಯ ತಪಾಸಣೆ, ಚಿಕಿತ್ಸೆಗೆ ಏನೂ ತೊಂದರೆ ಇಲ್ಲ ಎಂದು ಹೇಳುತ್ತಿದೆ.
ಆದರೆ, ಇಲ್ಲಿನ ಪರಿಸ್ಥಿತಿಯೇ ಬೇರೆ ಇದೆ. ಯಾರಿಗೂ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲ ಎಂಬ ಆರೋಪಗಳು ಮೊದಲಿನಿಂದಲೂ ಕೇಳಿಬರುತ್ತಿವೆ.