ಬೆಳಗಾವಿ: ಅರಣ್ಯ ಇಲಾಖೆಯಲ್ಲಿ ಎಸ್‍ಸಿ, ಎಸ್‍ಟಿ ಸರ್ಕಾರಿ ನೌಕರರಿಗೆ ಬಡ್ತಿ ಮೀಸಲಾತಿಯಲ್ಲಿ ಅನ್ಯಾಯವಾಗುತ್ತಿದ್ದು, ಈ ಕೂಡಲೇ ಅನ್ಯಾಯ ಸರಿಪಡಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಿವಿಧ ದಲಿತ ಸಂಘಟನೆಗಳ ಮುಖಂಡರು ಆಗ್ರಹಿಸಿದರು.
ಈ ವೇಳೆ ಸುದ್ದಿಗೋಷ್ಠಿಯಲ್ಲಿ ದಲಿತ ಸಂಘಟನೆಗಳ ಮುಖಂಡ ಮಲ್ಲೇಶ ಚೌಗಲೆ ಮಾತನಾಡಿ, ಬೆಳಗಾವಿ ಅರಣ್ಯ ಇಲಾಖೆಯಲ್ಲಿ ಪರಿಶಿಷ್ಟ ಜಾತಿಯ 21 ಮತ್ತು ಪರಿಶಿಷ್ಟ ಪಂಗಡದ 5 ಜನರು ಅರಣ್ಯ ರಕ್ಷಕರಾಗಿ 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಸರ್ಕಾರ ಇತ್ತೀಚೆಗೆ 116 ಅರಣ್ಯ ರಕ್ಷಕರನ್ನು ಉಪವಲಯ ಅರಣ್ಯಾಧಿಕಾರಿಗಳಾಗಿ ಬಡ್ತಿ ನೀಡಿದೆ. ಇದರಲ್ಲಿ ಎಸ್‍ಸಿ, ಎಸ್‍ಟಿ ನೌಕರರಿಗೆ ಅನ್ಯಾಯವಾಗಿದೆ. ಇದನ್ನು ರಾಜ್ಯ ಸರ್ಕಾರ ಕೂಡಲೇ ಸರಿಪಡಿಸಬೇಕು. ಜೇಷ್ಠತಾ ಪಟ್ಟಿಯಲ್ಲಿ ಆಗಿರುವ ಅನ್ಯಾಯವನ್ನು ತಿದ್ದುಪಡಿ ಮಾಡಬೇಕು ಎಂದು ಒತ್ತಾಯಿಸಿದರು.
ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿದ್ದ ಕೆ.ರತ್ನಪ್ರಭಾ ಅವರು ಜೇಷ್ಠತಾ ಪಟ್ಟಿ ಮಾರ್ಪಡಿಸಲು ನಿರ್ಬಂಧ ಹೇರಿದ್ದರು. ಆದರೆ ಈ ನಿಯಮಗಳನ್ನು ಗಾಳಿಗೆ ತೂರಿ ಏಕಪಕ್ಷೀಯವಾಗಿ ಹಲವರು ನಿರ್ಧಾರ ತೆಗೆದುಕೊಂಡಿದ್ದಾರೆ. ಸೂಕ್ತ ಕ್ರಮ ಕೈಗೊಳ್ಳದಿದ್ರೆ ಬರುವ ದಿನದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.