ಚಿಕ್ಕೋಡಿ: 14ನೇ ಹಣಕಾಸಿನ ಯೋಜನೆಯಲ್ಲಿ ಸಿಬ್ಬಂದಿ ವೇತನಕ್ಕೆ ಶೇ.10ರಷ್ಟು ಮೊತ್ತವನ್ನು ಮೀಸಲಿರಿಸಲು ವಿಳಂಬ ನೀತಿ ಅನುಸರಿಸುತ್ತಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರು ಚಿಕ್ಕೋಡಿ ತಾಲೂಕು ಪಂಚಾಯತ್ ಮುಂದೆ ಪ್ರತಿಭಟನೆ ಮಾಡಿದರು.
ಪಂಚಾಯತ್‌ಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ವೇತನ ಕೊರತೆಯಾಗುವ ಮೊತ್ತವನ್ನು 14ನೇ ಹಣಕಾಸಿನ ಯೋಜನೆಯಲ್ಲಿ ಶೇ.10ರಷ್ಟು ಮೊತ್ತವನ್ನು ಸಿಬ್ಬಂದಿ ಖಾತೆಗೆ ಜಮಾ ಮಾಡಿ ವೇತನ ನೀಡಬೇಕು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ನಾಲ್ಕು ಆದೇಶ ಹೊರಡಿಸಿದರೂ, ಇನ್ನೂವರೆಗೆ 14ನೇ ಹಣಕಾಸಿನಲ್ಲಿ ಶೇ.10 ರಷ್ಟು ಮೊತ್ತವನ್ನು ಸಿಬ್ಬಂದಿ ವೇತನಕ್ಕೆ ನೀಡಿಲ್ಲ.
ಚಿಕ್ಕೋಡಿ ತಾಲೂಕಿನಲ್ಲಿ ಒಂದನೇ ಕಂತಿನ ಕ್ರಿಯಾ ಯೋಜನೆ ಮಾಡಲಾಗಿದ್ದು, ಶೇ.10ರಷ್ಟು ಮೊತ್ತ ಕಾಯ್ದಿರಿಸಿಲ್ಲ. ಎರಡನೇ ಕಂತಿನ ಅನುದಾನ ಬಂದಿದ್ದರೂ ಈವರೆಗೆ ಕ್ರಿಯಾ ಯೋಜನೆ ಮಾಡಿಲ್ಲ. ಅದಕ್ಕೆ ಎರಡನೇ ಕಂತಿನ ಅನುದಾನದಡಿ ಕ್ರಿಯಾ ಯೋಜನೆ ಮಾಡಿ ಶೇ.10ರಷ್ಟು ಮೊತ್ತವನ್ನು ಸಿಬ್ಬಂದಿ ವೇತನಕ್ಕೆ ಕಾಯ್ದಿರಿಸಬೇಕೆಂದು ಒತ್ತಾಯಿಸಿ ನೂರಾರು ಪಂಚಾಯತ್ ನೌಕರರು ಪ್ರತಿಭಟಿಸಿದರು.