ಬೆಳಗಾವಿ: ಪಂಚಮಸಾಲಿ ಲಿಂಗಾಯತ ಪ್ರವರ್ಗ(2A) ಮೀಸಲಾತಿ ಹೋರಾಟಕ್ಕೆ ಸಂಬಂಧಿಸಿದಂತೆ ಆಗಸ್ಟ್ 26 ರಿಂದ ಅಕ್ಟೋಬರ್ 1ವರೆಗೂ ರಾಜ್ಯಮಟ್ಟದ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ನಗರದಲ್ಲಿ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ ಲಿಂಗಾಯತರಿಗೆ ಪ್ರವರ್ಗ (2A) ರಲ್ಲಿ ಮೀಸಲಾತಿ ನೀಡಲು ರಾಜ್ಯ ಸರ್ಕಾರ ಸೆಪ್ಟೆಂಬರ್ 15ರ ವರೆಗೆ ಕಾಲಾವಕಾಶ ಕೇಳಿದೆ. ಆದ್ದರಿಂದ ಸರ್ಕಾರಕ್ಕೆ ನಮ್ಮ ವಿಚಾರವನ್ನು ಮನದಟ್ಟು ಮಾಡಿಸುವುದರ ಜೊತೆಗೆ ಸಮುದಾಯದ ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ಆಗಸ್ಟ್ 26 ರಿಂದ ರಾಜ್ಯ ಮಟ್ಟದ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟದಿಂದ ಈ ಪಂಚಮಸಾಲಿ ಪತ್ರಿಜ್ಞಾ ಪಂಚಾಯಿತಿ ಎಂಬ ಅಭಿಯಾನ ಆರಂಭಗೊಳ್ಳಲಿದೆ. ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದ ಗೌಡ ಲಿಂಗಾಯತರು, ದೀಕ್ಷ ಲಿಂಗಾಯತರು, ಪಂಚಮಸಾಲಿ ಲಿಂಗಾಯತರು ಭಾಗಿಯಾಗಲಿದ್ದಾರೆ ಎಂದು ಸ್ವಾಮೀಜಿ ಮಾಹಿತಿ ನೀಡಿದರು.
ಮೀಸಲಾತಿ ವಿಚಾರಕ್ಕೆ ಈಗಾಗಲೇ ಸಿಎಂ ಬೊಮ್ಮಾಯಿ ಅವರನ್ನು ಭೇಟಿಯಾಗಿ ನಮ್ಮ ಬೇಡಿಕೆಗಳನ್ನು ಈಡೇರಿಸಲು ಅವರ ಮುಂದಿಟ್ಟಿದ್ದೇವೆ. ಅವರು ಕೂಡ ಭರವಸೆ ಕೊಟ್ಟಿದ್ದಾರೆ. ನಮ್ಮ ಸಮಾಜಕ್ಕೆ ನ್ಯಾಯ ದೊರಕಿಸಿ ಕೊಡುತ್ತಾರೆಂಬ ವಿಶ್ವಾಸವಿದೆ ಎಂದರು.
ಇದೇ ವೇಳೆ ಮಾಜಿ ಸಚಿವ ವಿನಯ್ ಕುಲಕರ್ಣಿ ಶನಿವಾರ ಹಿಂಡಲಗಾ ಜೈಲಿನಿಂದ ಬಿಡುಗಡೆ ಆದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಮಾಜ ಸಭೆಯಲ್ಲಿ ವಿನಯ್ ಕುಲಕರ್ಣಿಯವರ ಕುರಿತು ಮಾತನಾಡುವುದು ಸೂಕ್ತವಲ್ಲ. ವಿನಯ್ ಕುಲಕರ್ಣಿಯವರ ಪ್ರಕರಣ ಇನ್ನೂ ಕೋರ್ಟ್ನಲ್ಲಿದೆ. ಹೀಗಾಗಿ ಕಾನೂನಾತ್ಮಕ ಚೌಕಟ್ಟಿನಲ್ಲಿ ಪ್ರಕರಣ ನಡೆಯುತ್ತಿರುವ ಹಿನ್ನೆಲೆ ಕಾನೂನಿನಲ್ಲಿ ಬಂಧನ ಮತ್ತು ಬಿಡುಗಡೆ ಸಹಜ. ಹೀಗಾಗಿ ಆ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.