ಚಿಕ್ಕೋಡಿ: ಅಥಣಿ ತಾಲೂಕಿನ ಪಡತರವಾಡಿ ಗ್ರಾಮಕ್ಕೆ ಸರಿಯಾದ ಬಸ್ ಸಂಪರ್ಕವಿಲ್ಲದೆ ದಿನನಿತ್ಯ ನೂರಾರು ವಿದ್ಯಾರ್ಥಿಗಳು ಮತ್ತು ಜನರು ಸಂಕಷ್ಟ ಎದುರಿಸುವಂತಾಗಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಈ ಗ್ರಾಮಕ್ಕೆ ಕಳೆದ 15 ವರ್ಷಗಳಿಂದ ಬಸ್ ಸಂಚಾರ ಸ್ಥಗಿತಗೊಂಡಿದ್ದು ಗ್ರಾಮದ ಜನರು, ವಿದ್ಯಾರ್ಥಿಗಳು, ವಯೋವೃದ್ಧರು, ಮಹಿಳೆಯರಿಗೆ ತೊಂದರೆಯಾಗಿದೆ.
ಒಂದೂವರೆ ಕಿಲೋಮೀಟರ್ ದೂರದ ಐಗಳಿ-ತೆಲಸಂಗ್ ರಸ್ತೆಗೆ ಸಂಚಾರ ಮಾಡಿ ಬಳಿಕ ಅಲ್ಲಿಂದ ಬೇರೊಂದು ಬಸ್ ಮೂಲಕ ಊರುಗಳಿಗೆ ಸಂಚರಿಸಬೇಕಾಗಿದೆ. ಮಳೆಗಾಲ ಹಾಗೂ ರಾತ್ರಿ ಸಮಯದಲ್ಲಿ ಗ್ರಾಮಸ್ಥರಿಗೆ ತೀವ್ರ ತೊಂದರೆಯಾಗುತ್ತಿದೆ ಆದಷ್ಟು ಬೇಗನೆ ತಮ್ಮ ಗ್ರಾಮಕ್ಕೆ ಸರ್ಕಾರಿ ಬಸ್ ಸಂಪರ್ಕ ಕಲ್ಪಿಸುವಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಇಲ್ಲಿನ ಜನರು ಮನವಿ ಮಾಡಿದ್ದಾರೆ.
ಈ ಬಗ್ಗೆ ಗ್ರಾಮಸ್ಥರಾದ ಲಕ್ಷ್ಮಣ್ ಕೋಟ್ಯಾಳ ಹಾಗೂ ಜ್ಞಾನದೇವ ಜಾಧವ್ ಎಂಬುವರು ಮಾತನಾಡಿ, ಕಳೆದ ಐದಿನೈದು ವರ್ಷದಿಂದ ನಮ್ಮ ಗ್ರಾಮಕ್ಕೆ ಬಸ್ ಸಂಪರ್ಕವಿಲ್ಲದೆ ತುಂಬಾ ತೊಂದ್ರೆ ಉಂಟಾಗಿದೆ. ಸ್ಥಳೀಯ ಶಾಸಕ ಲಕ್ಷ್ಮಣ್ ಸವದಿ ಸಾರಿಗೆ ಸಚಿವರಾಗಿದ್ದ ವೇಳೆ ಬಸ್ ಸಂಪರ್ಕ ಕಲ್ಪಿಸುವುಂತೆ ಮನವಿ ಸಲ್ಲಿಸಲಾಗಿತ್ತು. ಆದರೇ ಈವರೆಗೂ ಗ್ರಾಮಕ್ಕೆ ಬಸ್ ಬಂದಿಲ್ಲ. ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತೇವೆ. ಆಗಲಾದರೂ ನಮ್ಮ ಸಮಸ್ಯೆ ಬಗರಹರಿಬಹುದು. ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ದಿನನಿತ್ಯವೂ ತೊಂದರೆ ಅನುಭವಿಸುವಂತಾಗಿದೆ.
ವಯೋವೃದ್ಧರು, ವಿಶೇಷ ಚೇತನರು ಬೇರೊಂದು ಊರಿಗೆ ಹೋಗಬೇಕಾದರೆ ಒಂದೂವರೆ ಕಿ.ಮೀ ನಡೆದುಕೊಂಡೇ ಹೋಗಬೇಕಾಗಿದೆ. ಚುನಾವಣೆ ಸಮಯದಲ್ಲಿ ತಪ್ಪದೇ ನಮ್ಮ ಗ್ರಾಮಕ್ಕೆ ಬಸ್ ಬರುತ್ತದೆ ಎಂದು ಆಶ್ವಾಸನೆ ಸಿಕ್ಕಿತ್ತು. ಆದಷ್ಟು ಬೇಗ ಈಗಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಇತ್ತ ಗಮನ ಹರಿಸಿ ಗ್ರಾಮದ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸಬೇಕು. ಇಲ್ಲವಾದರೆ ಗ್ರಾಮಸ್ಥರೆಲ್ಲ ಸೇರಿ ರಸ್ತೆ ತಡೆದು ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಸಮಸ್ಯೆ ಕುರಿತು ಚಿಕ್ಕೋಡಿ ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕರು ದೂರವಾಣಿ ಮೂಲಕ ಈಟಿವಿ ಭಾರತ ಜೊತೆ ಮಾತನಾಡಿ, ಈ ವಿಷಯ ನನ್ನ ಗಮನಕ್ಕೆ ಬಂದಿಲ್ಲಾ. ಅಲ್ಲಿ ಏನು ಸಮಸ್ಯೆ ಇದೆ ಎಂಬುದನ್ನು ಪರಿಶೀಲಿಸಲು ನಮ್ಮ ಅಥಣಿ ಘಟಕದ ಅಧಿಕಾರಿಗಳನ್ನು ಆ ಗ್ರಾಮಕ್ಕೆ ಕಳುಹಿಸಿ ಬಸ್ ಸಂಚಾರದ ವ್ಯವಸ್ಥೆಯನ್ನು ಕೂಡಲೇ ಪ್ರಾರಂಭ ಮಾಡುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: ಬೆಳಗಾವಿ: ಕಳ್ಳರೆಂದು ಭಾವಿಸಿ ಮೂವರನ್ನು ಕಂಬಕ್ಕೆ ಕಟ್ಟಿ ಗ್ರಾಮಸ್ಥರಿಂದ ಹಲ್ಲೆ.. ಪ್ರಕರಣ ದಾಖಲು