ಚಿಕ್ಕೋಡಿ: ''ಹಿರೇಕೋಡಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣದಲ್ಲಿ ಪೊಲೀಸರು ಆರೋಪಿಗಳನ್ನು ಕೆಲವೇ ಗಂಟೆಗಳಲ್ಲಿ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕೇಸ್ ಸಿಬಿಐಗೆ ಕೊಡುವುದು ಅಗತ್ಯವಿಲ್ಲ'' ಎಂದು ಲೋಕೋಪಯೋಗಿ ಸಚಿವ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಅವರು ನಂದಿ ಪರ್ವತ ಆಶ್ರಮಕ್ಕೆ ಭೇಟಿ ನೀಡಿದರು. ಅಲ್ಲಿರುವ ಜೈನ ಧರ್ಮದ ಮುಖಂಡರಿಗೆ ಸಾಂತ್ವನ ಹೇಳಿ ಸುದ್ದಿಗಾರರೊಂದಿಗೆ ಮಾತನಾಡಿದರು. ''ಈಗಾಗಲೇ ಗೃಹ ಸಚಿವರು ಭೇಟಿ, ಪರಿಶೀಲನೆ ನಡೆಸಿದ್ದಾರೆ. ರಾಜ್ಯ ಸರ್ಕಾರ ಈ ಬಗ್ಗೆ ಸಾಕಷ್ಟು ಗಮನ ಹರಿಸಿದೆ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ತಕ್ಷಣವೇ ಯಶಸ್ವಿಯಾಗಿದ್ದಾರೆ. ಇಂತಹ ಅಹಿತಕರ ಘಟನೆ ನಡೆದಿದ್ದು, ನಿಮಗೆಲ್ಲ ಗೊತ್ತಿರುವ ವಿಚಾರ. ಈ ರೀತಿ ಘಟನೆಗಳು ಮತ್ತೆ ನಡೆಯದಂತೆ ಕ್ರಮ ಕೈಗೊಳ್ಳಲಾಗುವುದು. ಸ್ವಾಮೀಜಿಗಳ ಹತ್ಯೆ ಪ್ರಕರಣವನ್ನು ಎಲ್ಲ ಪಕ್ಷಗಳು ಖಂಡನೆ ಮಾಡಿವೆ. ಈಗಾಗಲೇ ಪೊಲೀಸರು ಎಲ್ಲ ಆಯಾಮಗಳಿಂದಲೂ ತನಿಖೆ ಮಾಡಿದ್ದಾರೆ. ಆರೋಪಿಗಳನ್ನು ಸಹ ಬಂಧನ ಮಾಡಿದ್ದಾರೆ. ಪ್ರಕರಣವನ್ನು ಸಿಬಿಐಗೆ ವಹಿಸುವ ಅವಶ್ಯಕತೆ ಇಲ್ಲ. ಸಿಬಿಐನವರು ಮಾಡುವ ಕೆಲಸವನ್ನು ನಮ್ಮ ಪೊಲೀಸ್ನವರೇ ಮಾಡಿ ತೋರಿಸಿದ್ದಾರೆ. ಸದನದಲ್ಲಿಯೂ ಗೃಹ ಸಚಿವ ಡಾ.ಜಿ.ಪರಮೇಶ್ವರ ಈ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ. ಮತ್ತೆ ಈ ರೀತಿ ಘಟನೆಗಳು ನಡೆದಂತೆ ಜಾಗೃತಿವಹಿಸಲು ಹಿರಿಯ ಜನಪ್ರತಿನಿಧಿಗಳಿಂದ ಸಲಹೆಗಳನ್ನು ಪಡೆದುಕೊಂಡಿದ್ದಾರೆ'' ಎಂದು ತಿಳಿಸಿದರು.
ಇದಕ್ಕೂ ಮುನ್ನ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಜೈನಮುನಿ ಕಾಮಕುಮಾರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಬಳಿಕ ಜೈನಮುನಿಗಳು ವಾಸಿಸುತ್ತಿದ್ದ ಕೋಣೆಗೆ ಭೇಟಿ ನೀಡಿದರು. ಹತ್ಯೆಯ ಕುರಿತಂತೆ ಪ್ರಕರಣದ ತನಿಖಾಧಿಕಾರಿ ಡಿವೈಎಸ್‌ಪಿ ಬಸವರಾಜ ಯಲಿಗಾರ ಅವರಿಂದ ಮಾಹಿತಿ ಸಂಗ್ರಹಿಸಿದರು. ನಂತರ ಗ್ರಾಮದ ಜೈನ್ ಮುಖಂಡರಿಗೆ ಸಾಂತ್ವನ ಹೇಳಿದರು. ಈ ವೇಳೆ ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ, ಜೈನ ಮುಖಂಡ ಉತ್ತಮ ಪಾಟೀಲ, ವೀರಕುಮಾರ ಪಾಟೀಲ ಇದ್ದರು.
ಚಂದ್ರಯಾನ 3 ಮಿಷನ್ ಯಶಸ್ವಿ ಉಡಾವಣೆ- ಸಚಿವ ಜಾರಕಿಹೊಳಿಯಿಂದ ಪ್ರಶಂಸೆ: ''ಇಂದಿರಾ ಗಾಂಧಿ ಕಾಲದಿಂದಲೂ ಸಾಕಷ್ಟು ಉಪಗೃಹಗಳು ಉಡಾವಣೆ ಆಗಿವೆ. ನಮ್ಮ ವಿಜ್ಞಾನಿಗಳು ಹೊಸ ಅವಿಷ್ಕಾರಗಳನ್ನು ಅಳವಡಿಸಿಕೊಂಡು ಉಪಗ್ರಹ ಉಡಾವಣೆ ಮಾಡ್ತಿದ್ದಾರೆ. ಇಸ್ರೋ ನಮ್ಮ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ. ಚಂದ್ರಯಾನ- 3 ಯಶಸ್ವಿಯಾಗಿದ್ದು ವಿಜ್ಞಾನಿಗಳಿಗೆ ಪ್ರಶಂಸಿಸಬೇಕು'' ಎಂದು ಸಂತಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಐದು ಭಾಗ್ಯಗಳ ವಿವರ ನೀಡುವ ಬದಲು ಮೋದಿ ವಿರುದ್ಧ ಸಿಎಂ ವಾಗ್ದಾಳಿ ನಡೆಸಿದ್ದು ವಿಪರ್ಯಾಸ: ಕೋಟಾ ಶ್ರೀನಿವಾಸ್ ಪೂಜಾರಿ