ಚಿಕ್ಕೋಡಿ(ಬೆಳಗಾವಿ): ಚುನಾವಣೆಯ ಹೊಸ್ತಿಲಿನಲ್ಲಿ ಒಳ ಸಂಚುಗಳು, ಪಕ್ಷಾಂತರಗಳು ಹೆಚ್ಚಾಗಿ ನಡೆಯುತ್ತಿರುತ್ತಿವೆ. ಈಗ ಬಿಜೆಪಿ ಸರ್ಕಾರ ಮೇಲೆ ಪ್ರತಿಪಕ್ಷ ಆಪರೇಷನ್ ಕಮಲ ಸರ್ಕಾರ ಎಂದು ದೂರುತ್ತದೆ. 11 ಜನ ಕಾಂಗ್ರೆಸ್ನಿಂದ ಬಂಡಾಯ ಮಾಡಿ ಕುಮಾರಸ್ವಾಮಿ ಅವರ ಸಮ್ಮಿಶ್ರ ಸರ್ಕಾರ ಕೆಳಗಿಳಿಸಿದರು. ನಂತರ ಬಿಜೆಪಿ ಸೇರಿ ಚುನಾವಣೆಯಲ್ಲಿ ಗೆದ್ದು ಸರ್ಕಾರ ರಚನೆ ಆಯ್ತು. ಈಗ ಮತ್ತೆ ಬಿಜೆಪಿ ಶಾಸಕರಿಂದ ಅಪರೇಷನ್ ಕಮಲದ ಬಗ್ಗೆ ಹಿಂಟ್ ಕೊಟ್ಟಿದ್ದಾರೆ. ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಮುಂದಿನ ಚುನಾವಣೆಯಲ್ಲಿ ಬಹುಮತ ಬರದಿದ್ದರೆ ಗುದ್ದಾಡಿ ಗೆಲ್ಲುತ್ತೇವೆ ಎಂದಿದ್ದಾರೆ.
ಅವರು ಗೋಕಾಕ ನಗರದಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಮತ್ತು ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು. ಯಾವುದೆ ಕಾರಣಕ್ಕೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರೊದಿಲ್ಲ. ಹೇಗಾದರೂ ಮಾಡಿ ನಾವು ಬಿಜೆಪಿ ಸರ್ಕಾರ ರಚನೆ ಮಾಡುತ್ತೇವೆ. ಬಿಜೆಪಿಯಲ್ಲಿ ಕಡಿಮೆ ಬಂದರೂ ಗುದ್ದಾಡಿ ಆದರೂ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರುತ್ತೇವೆ. ಒಳ್ಳೆಯ ಅಭಿವೃದ್ಧಿ ಮಾಡೋಣ, ಒಳ್ಳೆಯ ಸರ್ಕಾರ ಮಾಡೋಣ. 2023ಕ್ಕೆ ಬಿಜೆಪಿ ಮುಖ್ಯಮಂತ್ರಿ ಇರುತ್ತಾರೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷ ಯಾವ ಕಾಲಕ್ಕೂ ಆಯ್ಕೆ ಆಗುವುದಿಲ್ಲ. ಕಾಂಗ್ರೆಸ್ ಕೇವಲ ಮುಸ್ಲಿಂ ವಿರೋಧಿ ಅಲ್ಲ, ಅದು ದಲಿತರ ವಿರೋಧಿ ಕೂಡಾ ಆಗಿದ್ದಾರೆ. ಇನ್ನು ಮುಂದೆ ಕೆಟ್ಟ ಹುಳಗಳು ಗೋಕಾಕದ ಬೀದಿಗಳಲ್ಲಿ ಬರ್ತಾವೆ ಮೂರು ತಿಂಗಳಲ್ಲಿ ಗೋಕಾಕದಲ್ಲಿ ಕೆಟ್ಟ ಹುಳಗಳದ್ದೇ ಹವಾ. ಆಮೇಲೆ ನಾಲ್ಕು ವರ್ಷ ಆ ಹುಳುಗಳು ಇರೋದಿಲ್ಲ, 3 ತಿಂಗಳು ಬಂದು ನಂತರ ಅವು ಮಲಗುತ್ತವೆ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಹರಿಹಾಯ್ದಿದ್ದಾರೆ.
ಬಿಜೆಪಿ ಮುಸ್ಲಿಂ ವಿರುದ್ಧ ವೈಯುಕ್ತಿಕ ದ್ವೇಷ ಸಾಧಿಸುವುದಿಲ್ಲ: ಬಿಜೆಪಿ ದೇಶದ ಕುರಿತು ಬಂದಾಗ ಮಾತ್ರ ಮುಸ್ಲಿಂ ವಿರೋಧಿಯಾಗಿ ನಡೆದುಕೊಂಡಿದೆ. ಅವರ ಜೊತೆ ಯಾವುದೇ ವೈಯುಕ್ತಿಕ ದ್ವೇಶವನ್ನು ಇದುವರೆಗೂ ಸಾಧಿಸಿಲ್ಲ. ಕಾಂಗ್ರೆಸ್ನಲ್ಲಿ ಐದು ಬಾರಿ ಆಯ್ಕೆ ಆಗಿದ್ದೇನೆ, ಅವರ ನಡೆ ನನಗೆ ತಿಳಿದಿದೆ. ಕಾಂಗ್ರೆಸ್ ಕೇವಲ ಮುಸ್ಲಿಂ ವಿರೋಧಿ ಅಲ್ಲ, ಅದು ದಲಿತರ ವಿರೋಧಿ ಕೂಡಾ ಎಂದು ಹೇಳಿದ್ದಾರೆ.
ಹೆಬ್ಬಾಳ್ಕರ್, ಜಾರಕಿಹೊಳಿ ಫೈಟ್: ರಮೇಶ್ ಜಾರಕಿಹೊಳಿ ಕಾಂಗ್ರೆಸ್ನಲ್ಲಿದ್ದಾಗ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಗೆಲುವಿಗಾಗಿ ಓಡಾಡಿದ್ದರು. ಈಗ ಬಿಜೆಪಿ ಸೇರಿದ ನಂತರ ಅವರಿಬ್ಬರ ನಡುವೆಯೇ ಗುದ್ದಾಟ ಆರಂಭವಾಗಿದೆ. ಹೆಬ್ಬಾಳ್ಕರ್ ಸೋಲಿಸಲು ಜಾರಕಿಹೊಳಿ ತಂತ್ರ ರೂಪಿಸುತ್ತಿದ್ದಾರೆ ಎಂದು ಈ ಹಿಂದೆ ಸುದ್ದಿಯಾಗಿತ್ತು. ಅಲ್ಲದೇ ಇತ್ತೀಚೆಗೆ ಜಾರಕಿಹೊಳಿ ಗ್ರಾಮೀಣ ಮಟ್ಟದಲ್ಲಿ ಹಳ್ಳಿ ಹಳ್ಳಿಗಳಿಗೆ ಓಡಾಡಿದ್ದರು. ಇದು ರಾಜಕೀಯ ತಂತ್ರ ಎಂದು ಹೇಳಲಾಗಿತ್ತು.
ಕೆಲ ದಿನಗಳ ಹಿಂದೆ ರಮೇಶ್ ಜಾರಕಿಹೊಳಿ ಅವರು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕ್ಷೇತ್ರದ ಸುಳೇಭಾವಿಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಪರೋಕ್ಷವಾಗಿ ಹೆಬ್ಬಾಳ್ಕರ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅವರು ಕೊಡುವ ವಸ್ತುಗಳೆಲ್ಲ ಸೇರಿ ಮೂರು ಸಾವಿರ ರೂಪಾಯಿ ಆಗಬಹುದು. ಆದರೆ ನಾವು ಆರು ಸಾವಿರ ಕೊಟ್ಟರೆ ವೋಟ್ ಹಾಕಿ ಎಂದು ಹೇಳಿದ್ದರು. ಜಾರಕಿಹೊಳಿಯವರ ಈ ಹೇಳಿಕೆಗೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮಾಧ್ಯಮಗೋಷ್ಟಿ ನಡೆಸಿ ತಿರುಗೇಟು ನೀಡಿದ್ದರು. ಮನೆ ಮಗಳಂತೆ ನನ್ನನ್ನು ಕ್ಷೇತ್ರದ ಜನ ನೋಡಿಕೊಂಡಿದ್ದಾರೆ. ನೀವು ಎಷ್ಟೇ ದುಡ್ಡು ಕೊಟ್ಟರೂ ಜನ ನನಗೆ ಮತ ಹಾಕುತ್ತಾರೆ. 'ಕಾಲಾಯ ತಸ್ಮೈ ನಮಃ' ಎನ್ನುವ ಮೂಲಕ ಜಾರಕಿಹೊಳಿಗೆ ಟಾಂಗ್ ಕೊಟ್ಟಿದ್ದರು.
ಇದನ್ನೂ ಓದಿ: '6 ಸಾವಿರ ಕೊಟ್ರೆ ನಮಗೆ ವೋಟ್ ಹಾಕಿ'.. ಜಾರಕಿಹೊಳಿ ಹೇಳಿಕೆಗೆ 'ಕಾಲಾಯ ತಸ್ಮೈ ನಮಃ' ಎಂದ ಲಕ್ಷ್ಮಿ ಹೆಬ್ಬಾಳ್ಕರ್