ಬೆಳಗಾವಿ: ಮೋರಿಯಲ್ಲಿ ಬಿದ್ದು ಒಂದು ವರ್ಷದ ಮಗು ಸಾವನ್ನಪ್ಪಿರುವ ದಾರುಣ ಘಟನೆ ಲೋಳೆಸುರ್ ಗ್ರಾಮದಲ್ಲಿ ನಡೆದಿದ್ದು, ಮಗುವಿನ ಸಾವಿಗೆ ಗ್ರಾಮ ಪಂಚಾಯತ್ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಗೋಕಾಕ್ ತಾಲೂಕಿನ ಲೋಳೆಸುರ್ ಗ್ರಾಮದ ಸಿದೀಕ್ ಸದ್ದಾಂ ತಹಶೀಲ್ದಾರ್ (1) ಮೃತ ಮಗು. ಮನೆಯ ಹತ್ತಿರ ಆಟ ಆಡಲು ಹೋಗಿರುವ ಸಂದರ್ಭದಲ್ಲಿ ಆಯತಪ್ಪಿ ಮೋರಿಯಲ್ಲಿ ಬಿದ್ದು ಸಾವನ್ನಪ್ಪಿದೆ. ಮಗುವಿನ ಸಾವಿಗೆ ಗ್ರಾಮ ಪಂಚಾಯತ್ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಗ್ರಾಮಸ್ಥರು ಹಾಗೂ ಸಂಬಂಧಿಕರು ಆರೋಪಿಸಿದ್ದಾರೆ.
ಇದನ್ನೂ ಓದಿ: ಆಸ್ಪತ್ರೆಗಳು & ಇತರ ಸೋಂಕುಗಳಿಂದ ಕೋವಿಡ್ ರೋಗಿಗಳ ಸಾವಿನ ಸಂಖ್ಯೆ ಹೆಚ್ಚಳ: ICMR ಅಧ್ಯಯನ
ಮನೆಯ ಪಕ್ಕದ ಮೋರಿಯನ್ನು ದುರಸ್ತಿ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿಕೊಳ್ಳಲಾಗಿತ್ತು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ.ಇದಾದ ಬಳಿಕ ರಮೇಶ್ ಜಾರಕಿಹೊಳಿ ಬಳಿಯೂ ದುರಸ್ತಿಗೆ ಮನವಿ ಸಲ್ಲಿಸಲಾಗಿತ್ತು. ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ರಮೇಶ್ ಜಾರಕಿಹೊಳಿ ಭರವಸೆ ನೀಡಿದ್ದರಂತೆ. ಆದ್ರೆ, ಸರಿಯಾದ ಸಮಯಕ್ಕೆ ಚರಂಡಿ ದುರಸ್ತಿ ಮಾಡಿಸಿದ್ರೆ ಪುಟ್ಟ ಮಗುವಿನ ಜೀವ ಉಳಿಯುತ್ತಿತ್ತು ಎಂದು ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದಾರೆ. ಇದೀಗ ಮಗು ಕಳೆದುಕೊಂಡಿರುವ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.