ಬೆಳಗಾವಿ: ಪ್ರತಿ ವರ್ಷದಂತೆ ಈ ವರ್ಷವೂ ನಗರದಲ್ಲಿ ಓಲ್ಡ್‌ಮ್ಯಾನ್ ಪ್ರತಿಕೃತಿಗಳನ್ನು ದಹಿಸುವ ಮೂಲಕ ಹೊಸವರ್ಷದ ಸ್ವಾಗತಕ್ಕೆ ಸಿದ್ಧತೆ ನಡೆಸಲಾಗುತ್ತಿದೆ.
ಬೆಳಗಾವಿಯ ಕ್ಯಾಂಪ್ ಪ್ರದೇಶದ ಗೌಳಿ ಗಲ್ಲಿಯ ಯುವಕರು ಹೊಸವರ್ಷದ ಸ್ವಾಗತಕ್ಕೆ ವಿನೂತನವಾದ ಓಲ್ಡ್‌ಮ್ಯಾನ್ ಪ್ರತಿಕೃತಿ ಸಿದ್ಧಪಡಿಸಿದ್ದಾರೆ. 2019ರಲ್ಲಿ ನಡೆದ ಅತ್ಯಾಚಾರ ಪ್ರಕರಣಗಳು 2020ರಲ್ಲಿ ಮರುಕಳಿಸದಿರಲಿ, ಅತ್ಯಾಚಾರ ಆರೋಪಿಗಳಿಗೆ ಗಲ್ಲುಶಿಕ್ಷೆ ಆಗಬೇಕು ಎಂಬ ಸಾಮಾಜಿಕ ಸಂದೇಶದೊಂದಿಗೆ 40 ಅಡಿ ಎತ್ತರದ ಅತ್ಯಾಚಾರ ಆರೋಪಿಯ ಓಲ್ಡ್‌ಮ್ಯಾನ್ ಪ್ರತಿಕೃತಿ ಸಿದ್ಧಪಡಿಸಿ ಇಂದು ರಾತ್ರಿ ದಹಿಸಲಾಗುತ್ತದೆ.
ಗೌಳಿ ಗಲ್ಲಿ ಯುವಕ ಮಂಡಳದ ಯುವಕರು ಒಂದು ತಿಂಗಳಿಂದ ಈ ಪ್ರತಿಕೃತಿ ಸಿದ್ಧಪಡಿಸಲು ಶ್ರಮ ಪಟ್ಟಿದ್ದಾರೆ. ಕೈದಿ ವೇಷ ಧರಿಸಿದ, ಅತ್ಯಾಚಾರ ಆರೋಪಿಯ ಪ್ರತಿಕೃತಿಗೆ ಕೈದಿ ನಂಬರ್ 376 ಸಂಖ್ಯೆ ನೀಡಿದ್ದಾರೆ. ಐಪಿಸಿ ಸೆಕ್ಷನ್ 376 ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ವಿಧಿಸಬೇಕು ಎಂದು ಹೇಳುತ್ತದೆ. ಈ ರೀತಿಯ ಕೃತ್ಯ ಮಾಡುವ ಕಾಮುಕರಿಗೆ ಎಚ್ಚರಿಕೆಯ ಸಂದೇಶ ನೀಡುವ ನಿಟ್ಟಿನಲ್ಲಿ ಈ ಓಲ್ಡ್‌ಮ್ಯಾನ್‌ನ್ನು ಇಲ್ಲಿಯ ಯುವಕರು ದಹಿಸಲಿದ್ದಾರೆ.