ಬೆಳಗಾವಿ: ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಿಸಿ ಮಹಾಂತೇಶ ಹಿರೇಮಠ ಅವರ ಅಧ್ಯಕ್ಷತೆಯಲ್ಲಿ ರಸ್ತೆ ಸುರಕ್ಷತಾ ಸಭೆ ಜರುಗಿತು. 15 ವರ್ಷ ಮೀರಿದ ಮ್ಯಾಕ್ಸಿಕ್ಯಾಬ್, ಆಟೋ ಪರವಾನಗಿ ನವೀಕರಿಸಬಾರದು ಎಂಬ ನಿರ್ದೇಶನ ಅನುಷ್ಠಾನಕ್ಕೆ ತರುವಲ್ಲಿ ಉಂಟಾದ ಸಮಸ್ಯೆಗಳು, ಹೆಲ್ಮೆಟ್ ಕಡ್ಡಾಯ ಸೇರಿದಂತೆ ಇತರ ರಸ್ತೆ ಸುರಕ್ಷತೆಗಳ ನಿಯಮಗಳ ಪಾಲನೆ ಕುರಿತು ಚರ್ಚೆ ನಡೆಸಲಾಯಿತು.
ಬಳಿಕ ಮಾತನಾಡಿದ ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವಾನಂದ ಮಗದುಮ್ ಮಾತನಾಡಿ, 15 ವರ್ಷದ ಮೀರಿದ ಮ್ಯಾಕ್ಸಿಕ್ಯಾಬ್‍ಗಳ ಪರವಾನಗಿ ತಡೆ ಹಿಡಿಯುವ ಕೆಲಸ ನಡೆಯಿತು. ಆದರೆ, ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಇದು ಅನುಷ್ಠಾನಕ್ಕೆ ಬರಲಿಲ್ಲ. ಆಟೋ ಮಾಲೀಕರು, ಚಾಲಕರು ಸಹ 15 ವರ್ಷ ಮೀರಿದ ಅಟೋಗಳ ಸಂಚಾರಕ್ಕೆ ಅನುಮತಿ ಕೇಳಲಾರಂಭಿಸಿದ್ದಾರೆ. ಹೀಗಾಗಿ, ಇಲ್ಲೂ ಕೂಡ ಅದೇ ಸಮಸ್ಯೆಯಾಗಿದೆ ಎಂದರು.
ಸಂಚಾರ ವಿಭಾಗದ ಪೊಲೀಸ್ ಅಧಿಕಾರಿ ಮಾತನಾಡಿ, 4 ವರ್ಷದ ಮಗುವಿಗೂ ಹೆಲ್ಮೆಟ್ ಕಡ್ಡಾಯಗೊಳಿಸಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ. ಪ್ರತಿ ವಾರವೂ ಎಷ್ಟು ಪ್ರಕರಣ ದಾಖಲಿಸಿದ್ದೇವೆ? ಯಾವ ಕ್ರಮ ಕೈಗೊಳ್ಳಲಾಗಿದೆ? ಎಷ್ಟು ದಂಡ ವಸೂಲಿ ಮಾಡಲಾಗಿದೆ? ಎಂಬುದರ ವರದಿ ಮಾನಿಟರ್ ಮಾಡಲು ತಂಡ ರಚಿಸಲಾಗಿದೆ ಎಂದರು. ಜಿಲ್ಲಾಧಿಕಾರಿ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದು ಸಲಹೆ, ಸೂಚನೆಗಳನ್ನು ನೀಡಿದರು.