ಬೆಳಗಾವಿ: ಮೊದಲ ಹಂತದ ಗ್ರಾಮ ಪಂಚಾಯತ್ ಚುನಾವಣೆಗೆ ಡಿ.07 ಮತ್ತು ಎರಡನೇ ಹಂತದ ಚುನಾವಣೆಗೆ ಡಿ.11 ರಂದು ಅಧಿಸೂಚನೆ ಹೊರಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಅಧಿಸೂಚನೆ ಹೊರಡಿಸಿದ ಬಳಿಕ ನಾಮಪತ್ರಗಳ ಸ್ವೀಕಾರ ಪ್ರಕ್ರಿಯೆ ಆರಂಭಗೊಳ್ಳಲಿದೆ. ನಾಮಪತ್ರ ಸಲ್ಲಿಸಲು ಮೊದಲನೇ ಹಂತಕ್ಕೆ ಡಿ.11, ಎರಡನೇ ಹಂತಕ್ಕೆ ಡಿ.16 ಕಡೆಯ ದಿನವಾಗಿರುತ್ತದೆ. ನಾಮಪತ್ರಗಳ ಪರಿಶೀಲನೆ ಮೊದಲನೇ ಹಂತಕ್ಕೆ ಡಿ.12, ಎರಡನೇ ಹಂತಕ್ಕೆ ಡಿ.17 ಆಗಿರುತ್ತದೆ. ಉಮೇದುವಾರಿಕೆ ಹಿಂಪಡೆಯಲು ಮೊದಲ ಹಂತ ಡಿ.14 ಹಾಗೂ ಎರಡನೇ ಹಂತ ಡಿ.19 ಕಡೆಯ ದಿನವಾಗಿರುತ್ತದೆ. ಮೊದಲ ಹಂತದ ಚುನಾವಣೆಗೆ ಡಿ.22 ಹಾಗೂ ಎರಡನೇ ಹಂತಕ್ಕೆ ಡಿ.27 ಮತದಾನ ನಡೆಯಲಿದ್ದು, ಡಿಸೆಂಬರ್ 30 ರಂದು ಮತ ಎಣಿಕೆ ನಡೆಯಲಿದೆ ಎಂದರು.
ರಾಜ್ಯ ಉಸ್ತುವಾರಿ-ಸಿಎಂ ಭೇಟಿ ಅಂತ್ಯ: ಮುಂದುವರಿದ ಸಂಪುಟ ವಿಸ್ತರಣೆ ಕುತೂಹಲ
ಆಯಾ ತಾಲೂಕುಗಳಲ್ಲಿ ಡಿ.30 ರಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ನಡೆಯಲಿದೆ. ಚುನಾವಣೆಗೆ ಸಂಬಂಧಿಸಿದಂತೆ ಏನಾದರೂ ಅಕ್ರಮಗಳು ಕಂಡು ಬಂದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ಥಾಪಿಸಲಾಗುವ ಕಂಟ್ರೋಲ್ ರೂಮ್, ಪೊಲೀಸ್ ಅಥವಾ ಅಬಕಾರಿ ಇಲಾಖೆಯ ಕಂಟ್ರೋಲ್ ರೂಮ್ಗೆ ಸಾರ್ವಜನಿಕರು ಮಾಹಿತಿಯನ್ನು ನೀಡಬಹುದು ಎಂದು ತಿಳಿಸಿದರು.
477 ಗ್ರಾಮ ಪಂಚಾಯತ್ಗಳಿಗೆ ಚುನಾವಣೆ:
ಡಿಸೆಂಬರ್ 2020 ರ ಅಂತ್ಯದವರೆಗೆ ಅವಧಿ ಮುಕ್ತಾಯವಾಗಲಿರುವ ಒಟ್ಟು ಜಿಲ್ಲೆಯ 499 ಗ್ರಾಮ ಪಂಚಾಯತ್ಗಳ ಪೈಕಿ 477 ಪಂಚಾಯತ್ಗಳ 2,738 ಕ್ಷೇತ್ರಗಳಿಗೆ ಹಾಗೂ ವಿವಿಧ ವರ್ಗವಾರು 8,195 ಸದಸ್ಯ ಸ್ಥಾನಗಳಿಗೆ ಎರಡು ಹಂತಗಳಲ್ಲಿ ಚುನಾವಣೆ ನಡೆಸಲಾಗುವುದು.
ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 259 ಹಾಗೂ 218 ಗ್ರಾಮ ಪಂಚಾಯತ್ ಸೇರಿ ಒಟ್ಟು 477 ಗ್ರಾ.ಪಂ.ಗಳಿಗೆ ಚುನಾವಣೆ ಜರುಗಲಿದೆ. ಆ ಪೈಕಿ ಮೊದಲ ಹಂತದಲ್ಲಿ ಬೆಳಗಾವಿ 55, ಖಾನಾಪೂರ, 51, ಹುಕ್ಕೇರಿ, ಬೈಲಹೊಂಗಲ 33, ಕಿತ್ತೂರು 16, ಗೋಕಾಕ್ 32, ಮೂಡಲಗಿ 20, ತಾಲೂಕಿನ ಗ್ರಾಮ ಪಂಚಾಯತ್ಗಳಿಗೆ ಚುನಾವಣೆ ನಡೆಯಲಿದೆ. ಎರಡನೇ ಹಂತದಲ್ಲಿ ಸವದತ್ತಿ 40, ರಾಮದುರ್ಗ 33, ಚಿಕ್ಕೋಡಿ 36, ನಿಪ್ಪಾಣಿ 27, ಅಥಣಿ 41, ಕಾಗವಾಡ 8, ರಾಯಬಾಗ 33 ಗ್ರಾಮ ಪಂಚಾಯತ್ಗಳಿಗೆ ಚುನಾವಣೆ ನಡೆಯಲಿದೆ. ಸಂಬಂಧಪಟ್ಟ ಗ್ರಾಮ ಪಂಚಾಯತಿಗಳಲ್ಲಿ ನಾಮಪತ್ರಗಳನ್ನು ಸ್ವೀಕರಿಸುವ ವ್ಯವಸ್ಥೆ ಮಾಡಲಾಗಿರುತ್ತದೆ. 7 ಗ್ರಾಮ ಪಂಚಾಯತ್ಗಳಿಗೆ ಚುನಾವಣೆ ನಡೆಯೋದಿಲ್ಲ ಎಂದು ಜಿಲ್ಲಾಧಿಕಾರಿ ವಿವರಿಸಿದರು.
ಜಿಲ್ಲೆಯಲ್ಲಿ 25.24 ಲಕ್ಷ ಮತದಾರರು:
ಪ್ರಸಕ್ತ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಜಿಲ್ಲೆಯಲ್ಲಿ 12,84,695 ಪುರುಷರು ಮತ್ತು 12,39,486 ಮಹಿಳೆಯರು ಸೇರಿದಂತೆ ಒಟ್ಟು 25,24,181 ಮತದಾರರು ಮತ ಚಲಾಯಿಸಲಿದ್ದಾರೆ. ಚುನಾವಣಾ ಪ್ರಕ್ರಿಯೆಗೆ ಒಟ್ಟು 534 ಚುನಾವಣಾಧಿಕಾರಿಗಳು ಹಾಗೂ 576 ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಲಾಗಿದೆ.
ಡಿಸೆಂಬರ್ 31ರವರೆಗೆ ನೀತಿ ಸಂಹಿತೆ:
ಚುನಾವಣೆ ನಡೆಯುವ ಗ್ರಾಮ ಪಂಚಾಯತ್ಗಳ ವ್ಯಾಪ್ತಿಯಲ್ಲಿ ನವೆಂಬರ್ 31 ರಿಂದ ಡಿಸೆಂಬರ್ 31 ರವರೆಗೆ ನೀತಿ ಸಂಹಿತೆ ಜಾರಿಯಲ್ಲಿರುವುದು. ಪಟ್ಟಣ ಪಂಚಾಯತ್, ಪುರಸಭೆ, ನಗರಸಭೆ, ನಗರ ಪಾಲಿಕೆ ಹಾಗೂ ಮಹಾನಗರ ಪಾಲಿಕೆಯ ಪ್ರದೇಶಗಳಿಗೆ ನೀತಿ ಸಂಹಿತೆ ಅನ್ವಯವಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಹಿರೇಮಠ ಮಾಹಿತಿ ನೀಡಿದರು.