ಬೆಳಗಾವಿ : ಪಕ್ಷದ ಪ್ರಮುಖರು ಮುಂದಿನ ವಾರದಲ್ಲಿ ಬಾಲಚಂದ್ರ ಜಾರಕಿಹೊಳಿ ಹಾಗೂ ನನಗೆ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದಾರೆ. ತಿನ್ನಲು, ಉಣ್ಣಲು ನಮಗೆ ತೋಟವಿದ್ದು ಮಂತ್ರಿ ಆಗಬೇಕೆಂಬ ಹಂಬಲವಿಲ್ಲ ಎಂದು ಮಾಜಿ ಸಚಿವ ಉಮೇಶ್ ಕತ್ತಿ ಪ್ರತಿಕ್ರಿಯಿಸಿದ್ದಾರೆ.
ನಗರದ ಸಾಮ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಕತ್ತಿ, ಮುಂದಿನ ವಾರದಲ್ಲಿ ಸಚಿವ ಸ್ಥಾನ ಕೊಟ್ಟರೆ ಸಮರ್ಪಕ ಕೆಲಸ ಮಾಡುತ್ತೇವೆ. ಇಲ್ಲದಿದ್ದರೆ ಕ್ಷೇತ್ರದ ಕೆಲಸ ಮಾಡಲು ಬದ್ಧವಿದ್ದೇವೆ ಎಂದರು.
ಲಕ್ಷ್ಮಣ್ ಸವದಿ ಹಾಗೂ ನನ್ನ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಪ್ರತಿನಿತ್ಯ ಅವರು ನನಗೆ ನಾಲ್ಕು ಬಾರಿ ಕರೆ ಮಾಡುತ್ತಾರೆ. ಅದರಲ್ಲಿ ಯಾವುದೇ ವಿಶೇಷ ಅರ್ಥ ಕಲ್ಪಿಸುವುದು ಬೇಡ. ನಮಗೆ ಪಕ್ಷದ ವಿರುದ್ಧ ಯಾವುದೇ ಅಸಮಾಧಾನ ಇಲ್ಲ ಜೊತೆಗೆ ಸಚಿವ ಸ್ಥಾನ ಬೇಕು ಎಂದು ಪಟ್ಟು ಹಿಡಿದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.