ಬೆಳಗಾವಿ: ಇಡೀ ದೇಶದಲ್ಲಿ ಬಿಜೆಪಿ ಅಭ್ಯರ್ಥಿಗಳ ನಾಮಪತ್ರ ಎಲ್ಲೂ ತಿರಸ್ಕಾರ ಆಗಲ್ಲ. ಅದು ಎ ಫಾರಂ, ಬಿ ಫಾರಂ, ಸಿ ಫಾರಂ ಯಾವುದೂ ತಿರಸ್ಕಾರ ಆಗಲ್ಲ. ಅದರ ಬಗ್ಗೆ ಸಮಯ ವ್ಯರ್ಥ ಮಾಡದೇ ಮತದಾರರ ಬಳಿ ಹೋಗುವುದು ಒಳ್ಳೆಯದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ಸವದತ್ತಿ ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ ನಾಮಪತ್ರ ಗೊಂದಲ ವಿಚಾರಕ್ಕೆ ಇಂದು ಬೆಳಗಾವಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, "ಚುನಾವಣೆಯಲ್ಲಿ ಜನ ವೋಟ್ ಹಾಕುತ್ತಾರೆ. ಯಾರನ್ನು ರಿಜೆಕ್ಟ್ ಮಾಡುವ ಅವಶ್ಯಕತೆಯಿಲ್ಲ. ಅಂತಿಮವಾಗಿ ಸೋಲಿಸೋದು, ಗೆಲ್ಲಿಸೋದು, ರಿಜೆಕ್ಟ್ ಮಾಡುವುದು ಜನ. ಎಲ್ಲಾ ಜನರ ಕೈಯಲ್ಲಿ ಇದೆ, ಏನು ಆಗುತ್ತೆ ನೋಡೋಣ. ಇಡೀ ದೇಶದಲ್ಲಿ ಬಿಜೆಪಿ ಅಭ್ಯರ್ಥಿಗಳ ನಾಮಪತ್ರ ಎಲ್ಲೂ ತಿರಸ್ಕಾರ ಆಗಲ್ಲ. ಆ ಕಡೆ ನಾವು ಸಮಯ ವ್ಯರ್ಥ ಮಾಡದೇ ಮತದಾರರ ಕಡೆ ಹೋಗೋದು ಒಳ್ಳೆಯದು" ಎಂದರು.
ಕಾಂಗ್ರೆಸ್ ಅಭ್ಯರ್ಥಿಗಳಿಗೆ ಹಣ ಪಡೆದು ಬಿ-ಫಾರಂ ನೀಡಿದೆ ಎಂಬ ಶೋಭಾ ಕರಂದ್ಲಾಜೆ ಆರೋಪಕ್ಕೆ ಪ್ರತಿಕ್ರಿಯಿಸಿ, "ಅದು ನಮ್ಮ ಪಕ್ಷದ ಆಂತರಿಕ ವಿಚಾರ ಅವರು ಚೆಕ್ ಮೂಲಕ ಹಣ ಕೊಟ್ಟಿದ್ದಾರೆ. ಇದಕ್ಕೆ ಚುನಾವಣೆ ಆಯೋಗ ಮತ್ತು ಕಾನೂನಿನಲ್ಲೂ ಅವಕಾಶವಿದೆ. ಅದರಲ್ಲಿ ತಪ್ಪೇನಿಲ್ಲ, ಪೇಪರ್ ಜಾಹೀರಾತಿಗೆ ಹಣ ತೆಗೆದುಕೊಳ್ಳುತ್ತಿದ್ದೇವೆ. ಮಿಕ್ಕಿದ ಹಣವನ್ನು ಬಿಲ್ಡಿಂಗ್ ಫಂಡ್ ಎಂದು ತೆಗೆದುಕೊಳ್ಳುತ್ತಿದ್ದೇವೆ" ಎಂದು ಸ್ಪಷ್ಟಪಡಿಸಿದರು.
ರಮೇಶ್ ಜಾರಕಿಹೊಳಿ ಗ್ರಾಮೀಣ ಬಿಟ್ಟು ಅಥಣಿಯಲ್ಲಿ ಹೆಚ್ಚು ಪ್ರಚಾರ ಮಾಡುತ್ತಿರುವ ಪ್ರಶ್ನೆಗೆ ಉತ್ತರಿಸಿ, "ಅವರ ಪಕ್ಷದಲ್ಲಿ ಅವರು ಜಿಲ್ಲೆಯ ಮುಖಂಡರಿದ್ದಾರೆ, ಎಲ್ಲ ಕಡೆ ಅವರಿಗೂ ಜವಾಬ್ದಾರಿ ಇದೆ. ಅವರ ಪಕ್ಷ ಗೆಲ್ಲಿಸುವುದಿಕ್ಕೆ ಅವರು ಹೋಗ್ತಾರೆ ನಮ್ಮ ಪಕ್ಷ ಗೆಲ್ಲಿಸಲಿಕ್ಕೆ ನಾವು ಹೋಗುತ್ತೇವೆ. ಅಲ್ಲಿ ವೈಯಕ್ತಿಕ ಪ್ರಶ್ನೆ ಬರೋದಿಲ್ಲ. ಲಕ್ಷ್ಮಣ ಸವದಿ, ಸತೀಶ್ ಜಾರಕಿಹೊಳಿ, ರಮೇಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ಅಂತ ವೈಯಕ್ತಿಕ ಬರುವುದಿಲ್ಲ. ಅಲ್ಲಿ ಕೇವಲ ಕಾಂಗ್ರೆಸ್, ಬಿಜೆಪಿ ಅಷ್ಟೇ ಬರುತ್ತದೆ ಎಂದು ಹೇಳುವ ಮೂಲಕ ರಮೇಶ ಜಾರಕಿಹೊಳಿ ಪರ ಬ್ಯಾಟ್ ಬೀಸಿದರು.
ಬಿಜೆಪಿ ತಂತ್ರಗಾರಿಕೆ ಈ ಬಾರಿ ನಡೆಯೋದಿಲ್ಲ: ಬಿಜೆಪಿ ಪಕ್ಷದ ತಂತ್ರಗಾರಿಕೆ ಹಳೆಯದಾಗಿದೆ. ಅದು ವರ್ಕೌಟ್ ಆಗುವುದಿಲ್ಲ. ಎಷ್ಟು ಸಾರಿ ಅಂತಾ ಇವರು ಸುಳ್ಳ ಹೇಳುವರು. ಮೋದಿ, ಅಮಿತ್ ಶಾ, ಸಿಎಂ ಬೊಮ್ಮಾಯಿ ಬಂದು ಸುಳ್ಳು ಹೇಳುತ್ತಾರೆ. ಜನ ಎಷ್ಟು ಸಾರಿ ಅವರು ಹೇಳಿದ ಸುಳ್ಳು ಕೇಳೋದು. ಹೀಗಾಗಿ ಅವರ ಯಾವುದೇ ತಂತ್ರಗಾರಿಕೆ ಈ ಬಾರಿ ನಡೆಯೋದಿಲ್ಲ ಎಂದು ಸತೀಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದರು.
24, 25ರಂದು ಬೆಳಗಾವಿ ಮತ್ತು ಚಿಕ್ಕೋಡಿ ಲೋಕಸಭಾ ಕ್ಷೇತ್ರಗಳಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಚಾರಕ್ಕೆ ಬರುತ್ತಾರೆ. ಒಂದು ದಿನ ನಾಲ್ಕು ಕ್ಷೇತ್ರಗಳು, ಇನ್ನೊಂದು ದಿನ ನಾಲ್ಕು ಕ್ಷೇತ್ರಗಳಲ್ಲಿ ಪ್ರಚಾರ ಮಾಡುತ್ತಾರೆ. ರಾಹುಲ್ ಗಾಂಧಿ ಮತ್ತೆ ಪ್ರಚಾರಕ್ಕೆ ಜಿಲ್ಲೆಗೆ ಬರುವುದಿಲ್ಲ. ಬೇರೆ ರಾಜ್ಯದ ಸಿಎಂಗಳು, ಮಾಜಿ ಮುಖ್ಯಮಂತ್ರಿಗಳು ಆಗಮಿಸುತ್ತಾರೆ ಎಂದು ಸತೀಶ ಜಾರಕಿಹೊಳಿ ಮಾಹಿತಿ ನೀಡಿದರು.
ಇದನ್ನೂ ಓದಿ:ಮೋದಿ ಸುದೀರ್ಘ ಪ್ರಯಾಣ: 36 ಗಂಟೆಗಳಲ್ಲಿ 5000 ಕಿ ಮೀ ಸಂಚರಿಸಲಿರುವ ಪ್ರಧಾನಿ