ಬೆಳಗಾವಿ : ಬರೋಬ್ಬರಿ 11 ತಿಂಗಳ ಬಳಿಕ ಬೆಳಗಾವಿ ಜಿಲ್ಲೆಯಲ್ಲಿಂದು ಒಂದೇ ಒಂದು ಕೊರೊನಾ ಪ್ರಕರಣ ಕಾಣಿಸಿಲ್ಲ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ಕೊರೊನಾ ಬುಲೆಟಿನ್ನಲ್ಲಿ ಇಂದು ಒಂದೂ ಕೇಸ್ ದಾಖಲಾಗಿಲ್ಲ.
ಕಳೆದ ವರ್ಷದ ಏಪ್ರಿಲ್ ತಿಂಗಳಲ್ಲಿ ಜಿಲ್ಲೆಯಲ್ಲಿ ಏಕಕಾಲಕ್ಕೆ ಮೂವರಲ್ಲಿ ಕೊರೊನಾ ಸೋಂಕು ಕಾಣಿಸಿತ್ತು. ನಂತರದ ದಿನಗಳಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗಿ, ಪೀಡಿತರ ಸಂಖ್ಯೆಯಲ್ಲಿ ರಾಜ್ಯದಲ್ಲೇ ಬೆಳಗಾವಿ 2ನೇ ಸ್ಥಾನದಲ್ಲಿತ್ತು.
ಕೊರೊನಾ ಹಾವಳಿ ತಣ್ಣಗಾದ ಬಳಿಕವೂ ಜಿಲ್ಲೆಯಲ್ಲಿ ನಿನ್ನೆಯವರೆಗೆ ಕನಿಷ್ಟ ನಾಲ್ಕೈದು ಕೊರೊನಾ ಪ್ರಕರಣ ಕಾಣಿಸಿದ್ದವು. ಆದರೆ, 11 ತಿಂಗಳ ಬಳಿಕ ಇಂದು ಒಂದೂ ಪ್ರಕರಣ ದಾಖಲಾಗಿಲ್ಲ.
ಈವರೆಗೆ ಜಿಲ್ಲೆಯಲ್ಲಿ 5,16,964 ಜನರ ಸ್ಯಾಂಪಲ್ ಕಲೆಕ್ಟ್ ಮಾಡಲಾಗಿತ್ರು. 26,860 ಜನರಿಗೆ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿತ್ತು. 342 ಜನರು ಮಹಾಮಾರಿ ಕೊರೊನಾಗೆ ಬಲಿಯಾಗಿದ್ದಾರೆ. ಜಿಲ್ಲಾಸ್ಪತ್ರೆಯ ಕೊರೊವಾ ವಾರ್ಡ್ನಲ್ಲಿ ಪ್ರಸ್ತುತ 76 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
ನೆರೆಯ ಮಹಾರಾಷ್ಟ್ರದಲ್ಲಿ ಕೊರೊನಾ 2ನೇ ಅಲೆ ಕಾಣಿಸಿದೆ. ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ನಿನ್ನೆಯಷ್ಟೇ ಬೆಳಕಿಗೆ ಬಂದ 15 ಪ್ರಕರಣಗಳಲ್ಲಿ ಎಂಟು ಜನ ಸೋಂಕಿತರು ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ.