ಬೆಳಗಾವಿ: ಪ್ರವಾಹ ಬಂದು 30 ತಿಂಗಳು ಕಳೆದರೂ ಪರಿಹಾರ ನೀಡದಿರುವುದಕ್ಕೆ ಘಟಪ್ರಭಾ ನದಿ ತೀರದ ಗ್ರಾಮಗಳ ನೆರೆ ಸಂತ್ರಸ್ತರು ಆಕ್ರೋಶ ಹೊರಹಾಕಿದ್ದಾರೆ. ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ್ ನೇತೃತ್ವದಲ್ಲಿ ಇಲ್ಲಿನ ಡಿಸಿ ಕಚೇರಿ ಆವರಣದಲ್ಲಿ ನೆರೆ ಸಂತ್ರಸ್ತರು ಪ್ರತಿಭಟನೆ ಆರಂಭಿಸಿದ್ದಾರೆ.
ಗೋಕಾಕ್, ಮೂಡಲಗಿ ತಾಲೂಕಿನ 26ಕ್ಕೂ ಹೆಚ್ಚು ಗ್ರಾಮಗಳ ನೆರೆ ಸಂತ್ರಸ್ತರ ಧರಣಿಯಲ್ಲಿ ಪಾಲ್ಗೊಂಡಿದ್ದಾರೆ. ಪರಿಹಾರ ನೀಡುವವರೆಗೂ ಅನಿರ್ದಿಷ್ಟಾವಧಿ ಧರಣಿಗೆ ನೆರೆ ಸಂತ್ರಸ್ತರು ನಿರ್ಧರಿಸಿದ್ದಾರೆ. ಪ್ರವಾಹದಲ್ಲಿ ಮನೆ ಕಳೆದುಕೊಂಡ ನೈಜ ಸಂತ್ರಸ್ತರಿಗೆ ಮನೆ ಕಟ್ಟಲು ಪರಿಹಾರ ಸಿಕ್ಕಿಲ್ಲ ಎಂದರು.
ಗೋಕಾಕ್ ತಾಲೂಕಿನಲ್ಲಿ 828 ಮನೆಗಳು, ಮೂಡಲಗಿ ತಾಲೂಕಿನ 395 ಮನೆಗಳಿಗೆ ಪರಿಹಾರ ಮಂಜೂರಾಗಿಲ್ಲ. 192 ಮನೆಗಳು ಸಂಪೂರ್ಣವಾಗಿ ಬಿದ್ದರೂ ಅವುಗಳನ್ನು 'ಸಿ' ಕೆಟಗಿರಿಗೆ ಸೇರಿಸಿದ್ದಾರೆ. ನೆರೆ ಸಂತ್ರಸ್ತರಿಗೆ ಮನೆ ಪರಿಹಾರ ನೀಡುವಾಗ ಲಂಚ ಪಡೆದ ಆರೋಪಗಳಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೋರಾಟಗಾರರು ಆಗ್ರಹಿಸಿದರು.
ಪ್ರತಿಭಟನಾ ಸ್ಥಳದಲ್ಲೇ ಅಡುಗೆ ಮಾಡಿ ವಾಸ್ತವ್ಯ ಹೂಡಲು ಪ್ರತಿಭಟನಾನಿರತರು ಸಿದ್ಧತೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನೆ ಹಿಂಪಡೆಯುವಂತೆ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮನವಿ ಮಾಡಿದರು. ನೆರೆ ಪರಿಹಾರದಲ್ಲಿ ಲೋಪವಾಗಿದ್ದರೆ ಕ್ರಮ ಕೈಗೊಳ್ಳುವುದಾಗಿ ಡಿಸಿ ಭರವಸೆ ನೀಡಿದರು. ಡಿಸಿ ಮನವಿ ಮಾಡಿದರೂ ಸಂತ್ರಸ್ತರು ಪ್ರತಿಭಟನೆ ಮುಂದುವರಿಸಿದರು.
ಈ ಕುರಿತು 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ್, ವಿಧಾನಸೌಧದಲ್ಲಿ ಕೋಟ್ಯಂತರ ರೂ. ಖರ್ಚು ಮಾಡಿ ಕಲಾಪ ನಡೆಯುತ್ತಿದ್ದರೆ ಅಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಕಲಾಪದಲ್ಲಿ ಪ್ರತಿಭಟನೆ ನಡೆಸಿದವರಿಗೆ ಹಾಸಿಗೆ, ದಿಂಬು, ಊಟದ ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿ ಪ್ರತಿಭಟನಾನಿರತ ನೆರೆ ಸಂತ್ರಸ್ತರಿಗೂ ವ್ಯವಸ್ಥೆ ಮಾಡುವಂತೆ ಜಿಲ್ಲಾಡಳಿತಕ್ಕೆ ಒತ್ತಾಯಿಸಿದರು.
ಇದನ್ನೂ ಓದಿ: ಸುಳ್ಯ: ಟೂತ್ ಪೇಸ್ಟ್ ಎಂದು ಭಾವಿಸಿ ಇಲಿ ಪಾಷಾಣದಿಂದ ಬ್ರೆಷ್ ಮಾಡಿದ ವಿದ್ಯಾರ್ಥಿನಿ ಸಾವು