ಬೆಳಗಾವಿ : ಕೇಂದ್ರ ಸಚಿವ ಸುರೇಶ ಅಂಗಡಿ ಅಕಾಲಿಕ ನಿಧನದಿಂದ ಬೆಳಗಾವಿ ಲೋಕಸಭೆ ಕ್ಷೇತ್ರದ ಉಪಚುನಾವಣೆ ದಿನಾಂಕ ಇನ್ನೂ ಘೋಷಣೆ ಆಗಿಲ್ಲ. ಆದರೂ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ-ಕಾಂಗ್ರೆಸ್ ಅಭ್ಯರ್ಥಿಗಳಿಗೆ ತಲಾಷ್ ಜತೆಗೆ ಅಭ್ಯರ್ಥಿ ಗೆಲುವಿಗೆ ತಂತ್ರ ರೂಪಿಸುತ್ತಿವೆ.
ಕರ್ನಾಟಕದಲ್ಲಿ ನೆಲೆ ಇಲ್ಲದ ಮಹಾರಾಷ್ಟ್ರ ಮೈತ್ರಿ ಸರ್ಕಾರದ ಭಾಗವಾಗಿರುವ ಎನ್‌ಸಿಪಿ (ರಾಷ್ಟ್ರವಾದಿ ಕಾಂಗ್ರೆಸ್ ಪಾರ್ಟಿ) ತನ್ನ ಅಭ್ಯರ್ಥಿ ಘೋಷಿಸಿದೆ. ಚುನಾವಣೆ ಘೋಷಣೆಗೂ ಮೊದಲೇ ಅಭ್ಯರ್ಥಿ ಘೋಷಿಸಿ ಎನ್‌ಸಿಪಿ ಮುಖಂಡರು ಅಚ್ಚರಿ ಮೂಡಿಸಿದ್ದಾರೆ.
ಮಹಾರಾಷ್ಟ್ರ ಎನ್‌ಸಿಪಿ ನಾಯಕರು ಗಡಿ ವಿವಾದ ಪ್ರಸ್ತಾಪಿಸುವ ಮೂಲಕ ಮರಾಠಿ ಭಾಷಿಕರ ಓಲೈಸುವ ಕೆಲಸ ಮಾಡುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡು ಎನ್‌ಸಿಪಿ ಇದೀಗ ಅಭ್ಯರ್ಥಿ ಘೋಷಿಸಿದೆ.
ಶರದ್ ಪವಾರ್ ನೇತೃತ್ವದ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದಿಂದ ಬೆಳಗಾವಿ ಲೋಕಸಭಾ ಕ್ಷೇತ್ರದ ಎನ್‌ಸಿಪಿ ಅಭ್ಯರ್ಥಿಯಾಗಿ ಅಮೋಲ್ ದೇಸಾಯಿ ಆಯ್ಕೆ ಆಗಿದ್ದಾರೆ. ಬೆಳಗಾವಿ ಎನ್‌ಸಿಪಿ ಜಿಲ್ಲಾಧ್ಯಕ್ಷ ರಾಜು ಪಾಟೀಲ್ ಅವರು ಅಮೋಲ್ ಹೆಸರನ್ನು ಇಂದು ಘೋಷಿಸಿದರು. ಪಕ್ಷದ ಕಚೇರಿಯಲ್ಲಿ ಅಮೋಲ್ ದೇಸಾಯಿಗೆ ಮಾಲಾರ್ಪಣೆ ಮಾಡಿ ಸ್ಥಳೀಯ ಕಾರ್ಯಕರ್ತರು ಅಭಿನಂದನೆ ಸಲ್ಲಿಸಿದರು.