ಬೆಳಗಾವಿ: ಮಾನಹಾನಿ ಸೇರಿ ವಿವಿಧ ಆರೋಪಗಳಡಿ ದಾಖಲಾದ ಪ್ರಕರಣಗಳಲ್ಲಿ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ರಾಜಕುಮಾರ್ ಟಾಕಳೆ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯ ಈಗಾಗಲೇ ತಿರಸ್ಕರಿಸಿದೆ. ಆದ್ರೆ, ಆರೋಪಿ ಅಧಿಕಾರಿಯ ವಿರುದ್ಧ ಎಫ್ಐಆರ್ ಆಗಿ 13 ದಿನಗಳು ಕಳೆದರೂ ಪೊಲೀಸರು ಈವರೆಗೂ ಬಂಧಿಸಿಲ್ಲ ಎಂದು ಸಾಮಾಜಿಕ ಕಾರ್ಯಕರ್ತೆ ನವ್ಯಶ್ರೀ ಆರ್.ರಾವ್ ದೂರಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹನಿಟ್ರ್ಯಾಪ್ ಆರೋಪದ ಬಗ್ಗೆ ದೂರಿನ ಗೊತ್ತಾಗುತ್ತಿದ್ದಂತೆ ನಾನು ವಿದೇಶದಿಂದ ಬಂದ ಬಳಿಕ 20 ದಿನಗಳಿಂದ ಬೆಳಗಾವಿಯಲ್ಲೇ ಇದ್ದು ಕಾನೂನು ಹೋರಾಟ ಮಾಡುತ್ತಿದ್ದೇನೆ. ನನಗಾದ ಅನ್ಯಾಯದ ವಿರುದ್ಧ ಎಪಿಎಂಸಿ ಠಾಣೆಗೆ ದೂರು ನೀಡಿದ್ದೇನೆ. ರಾಜಕುಮಾರ ಟಾಕಳೆಗೆ ನಿರೀಕ್ಷಣಾ ಜಾಮೀನು ತಿರಸ್ಕರಿಸುವ ಮೂಲಕ ನ್ಯಾಯಾಲಯ ನನಗೆ ಮತ್ತಷ್ಟು ಶಕ್ತಿ ತುಂಬಿದೆ ಎಂದರು.
ಆದರೆ, ಇನ್ನೂ ರಾಜಕುಮಾರ ಟಾಕಳೆ ಬಂಧನ ಯಾಕೆ ಆಗಿಲ್ಲ?. ಬುಧವಾರ ಸಂಜೆ ಮನೆಯಿಂದ ಆತ ಪರಾರಿಯಾಗಿದ್ದಾನೆ. ದಯಮಾಡಿ ಆತನನ್ನು ಬಂಧನ ಮಾಡಬೇಕು. ಆತ ನನ್ನ ಹೆಂಡತಿ ಅಂತಾ ಒಪ್ಪಿಕೊಳ್ಳಲಿ ಅಥವಾ ಬಿಡಲಿ ಅದನ್ನು ಹೇಗೆ ಸಾಬೀತು ಮಾಡಬೇಕೆಂದು ನನಗೆ ಗೊತ್ತಿದೆ. ನನ್ನನ್ನು ಕಿಡ್ನಾಪ್ ಮಾಡಿರುವ ಸಿಸಿ ಕ್ಯಾಮರಾ ದೃಶ್ಯಗಳನ್ನು ಕೊಟ್ಟಿದ್ದೇನೆ. ಪೊಲೀಸ್ ಇಲಾಖೆಗೆ ಬೇಕಾದ ಅಗತ್ಯ ದಾಖಲೆ ನೀಡಿದ್ದೇನೆ ಎಂದು ಹೇಳಿದರು.
ಮೊಬೈಲ್ ಸೀಜ್ ಮಾಡಿ: ಈ ಪ್ರಕರಣದಲ್ಲಿ ನಾನು ರಾಜಕೀಯ ನಾಯಕರ ಬೆಂಬಲ ನಾನು ಕೇಳಿಲ್ಲ. ರಾಜಕುಮಾರ ಟಾಕಳೆಗೆ ದುಡ್ಡು ಕೊಟ್ಟು ಕೊಂಡುಕೊಳ್ಳುವ ಅಭ್ಯಾಸ ಇದೆ. ಆತನ ಮೊಬೈಲ್ ಸೀಜ್ ಮಾಡಿದ್ರೆ ಮತ್ತಷ್ಟು ಹೆಣ್ಣು ಮಕ್ಕಳ ಮರ್ಯಾದೆ ಉಳಿಯುತ್ತದೆ ಎಂದೂ ನವ್ಯಶ್ರೀ ಹೇಳಿದರು.
ಮಹಿಳಾ ಪೊಲೀಸ್ ಠಾಣೆಯಲ್ಲಿ ಟಾಕಳೆ ನನ್ನ ಬಳಿ ಸಾಲದ ಹಣ ಪಡೆದಿದ್ದು ಬರೆದು ಕೊಟ್ಟಿದ್ದಾನೆ. ಎರಡು ಲಕ್ಷ ರೂ. ಡಿಡಿ ಬಡ್ಡಿ ಸಮೇತ ಸಂದಾಯ ಮಾಡಿರುತ್ತೇನೆ. ಇನ್ಮುಂದೆ ನಾನು ನವ್ಯಶ್ರೀ ಯಾವ ವಿಚಾರಕ್ಕೆ ಹೋಗಲ್ಲ ಅಂತಾ ಬರೆದುಕೊಟ್ಟಿದ್ದಾರೆ. ನನಗೆ ಕೊಡಬೇಕಾದ ಹಣ ಕೊಟ್ಟು ಈಗ ಎಫ್ಐಆರ್ನಲ್ಲಿ ತಿರುಚಿದ್ದಾನೆ. ಈ ಮೂಲಕ ತಾನೇ ತೋಡಿದ ಖೆಡ್ಡಾಗೆ ಬಿದ್ದಿದ್ದಾನೆ ಎಂದರು.
ನಾನು ಓಡಿ ಹೋಗಿಲ್ಲ: ಸಾವಿರ ಟೀಕೆ ಎದುರಿಸುವ ಶಕ್ತಿ ನನ್ನ ಹತ್ತಿರ ಇದೆ. ನನ್ನ ವಿರುದ್ಧ ಹನಿಟ್ರ್ಯಾಪ್ ಆರೋಪ ಮಾಡಿದ ತಕ್ಷಣ ನಾನು ಓಡಿ ಹೋಗಿಲ್ಲ. 20 ದಿನಗಳಿಂದ ಎಪಿಎಂಸಿ ಠಾಣೆಗೆ ವಿಚಾರಣೆಗೆ ಹೋಗುತ್ತಿದ್ದೇನೆ. ಸತ್ಯದ ಪರ ನಿಂತಿದ್ದು, ನಾನು ಮುಂದೆ ಕೂಡ ಓಡಿ ಹೋಗಿಲ್ಲ ಎಂದು ತಿಳಿಸಿದರು.
ಚುನಾವಣಾ ಪ್ರಚಾರ ಮಾಡಿದ್ದೇನೆ: ನಾನು ನಾಯಕಿ ಅಲ್ಲ, ಸೇವಕಿ ಅಂತಾ ಈಗಾಗಲೇ ಹೇಳಿದ್ದೇನೆ. ಮಹಾರಾಷ್ಟ್ರದ ವಿಧಾನಸಭೆ ಚುನಾವಣೆಯಲ್ಲಿ ಚಂದ್ರಾಪುರ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದೇನೆ. ಕೇರಳ, ದೆಹಲಿ ವಿಧಾನಸಭಾ ಚುನಾವಣೆ ವೇಳೆ ಯೂ ಪ್ರಚಾರ ಮಾಡಿದ್ದೇನೆ. ಕರ್ನಾಟಕದಲ್ಲಿ ಉಪಚುನಾವಣೆಯಲ್ಲೂ ಕೆಲಸ ಮಾಡಿದ್ದೇನೆ ಎಂದು ವಿವರಿಸಿದರು.
ನವ್ಯಶ್ರೀ ಫೌಂಡೇಶನ್ ಸರ್ಕಾರದಿಂದ ನೊಂದಾಯಿತ ಸಂಸ್ಥೆಯಾಗಿದೆ. ನೆರೆ ವೇಳೆ ಬಾಗಲಕೋಟೆಗೆ ಹೋಗಿ ಕೆಲಸ ಮಾಡಿದ್ದೇನೆ. ಕೋವಿಡ್ ವೇಳೆ ರೈತರ ಬಳಿ ತರಕಾರಿ ಖರೀದಿಸಿದ್ದೇವೆ. ನವ್ಯ ಫೌಂಡೇಶನ್ಗೆ ನವ್ಯಶ್ರೀ ಒಬ್ಬಳೇ ಅಲ್ಲ. ಎಲ್ಲ ಪದಾಧಿಕಾರಿಗಳು ಇದ್ದಾರೆ. ನವ್ಯ ಫೌಂಡೇಶನ್ಗೆ ಬಹಳಷ್ಟು ಜನ ಸಹಕಾರ ಕೊಟ್ಟಿದ್ದಾರೆ ಎಂದರು.
ಬಿಗ್ಬಾಸ್ಗೆ ಏಕೆ ಹೋಗಬಾರದು?: ಬಿಗ್ಬಾಸ್ ಕಾರ್ಯಕ್ರಮಕ್ಕೆ ಹೋಗುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಗ್ಬಾಸ್ ಕಾರ್ಯಕ್ರಮಕ್ಕೆ ನವ್ಯಶ್ರೀ ಆಯ್ಕೆ ಏಕೆ ಹೋಗಬಾರದು?. ಈ ಬಗ್ಗೆ ಚರ್ಚೆ ಆಗುತ್ತಿರುವುದು ನನ್ನ ಗಮನಕ್ಕೆ ಇದೆ. ಅಲ್ಲದೇ, ಆ ಬಿಗ್ಬಾಸ್ ನಡೆಸುವ ವಾಹಿನಿಗೆ ನನಗೆ ಸಂಬಂಧ ದಾಖಲೆ ಹೋಗಿವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ನಿರೀಕ್ಷಣಾ ಜಾಮೀನು ಅರ್ಜಿ ವಜಾ: ಕೃಷಿ ಇಲಾಖೆ ಅಧಿಕಾರಿ ರಾಜಕುಮಾರ್ ಟಾಕಳೆಗೆ ಸಂಕಷ್ಟ