ಬೆಳಗಾವಿ : ಕೊರೊನಾ ಪರಿಣಾಮದಿಂದ ಹೊಟ್ಟೆ ಹೊರೆಯಲು ನೇಕಾರರಿಕೆ ಬಿಟ್ಟು ಬೀದಿಗಳಿದ ನೂರಾರು ಜನರಿಗೆ ಆಸರೆಯಾಗಬೇಕಿದ್ದ ಉದ್ಯೋಗ ಖಾತ್ರಿ ಯೋಜನೆ ಕಳೆದ ಆರು ತಿಂಗಳಿಂದ ಹಣ ಸಂದಾಯ ಮಾಡದೇ ಸತಾಯಿಸುತ್ತಿದೆ. ಆರು ತಿಂಗಳ ಕಾಲ ಕೆಲಸ ಮಾಡಿಸಿಕೊಂಡು ಸಂಬಳ ನೀಡದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಬೆಳಗಾವಿ ತಾಲೂಕಿ ಸುಳೇಭಾವಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದ್ದಾರೆ.
ಗ್ರಾಮದಲ್ಲಿ ಬಹುತೇಕ ಜನ ನೇಕಾರಿಕೆ ಮಾಡುತ್ತಿದ್ದು ಕೊರೊನಾ ಹಿನ್ನೆಲೆ ಹಾಗೂ ಕುಟುಂಬ ನಿರ್ವಹಣೆ ಕಷ್ಟವಾಗಿದ್ದರಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸಕ್ಕೆ ಸೇರಿದ್ದರು. ಆದರೆ, ಕೆಲಸ ಮಾಡಿಸಿಕೊಂಡ ಅಧಿಕಾರಿಗಳು 6 ತಿಂಗಳಾದರೂ ಹಣ ನೀಡದೇ ಸತಾಯಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಸುಮಾರು ಐನೂರು ಜನರು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿದ್ದಾರೆ. ಲಾಕ್‌ಡೌನ್ ವೇಳೆ ಸಂಬಳ ಬರುತ್ತೆ ಎಂಬ ಆಶಾವಾದಲ್ಲಿದ್ದೆವು. ಆದರೆ, ಆರು ತಿಂಗಳ ಕಾಲ ಕೆಲಸ ಮಾಡಿಸಿಕೊಂಡು ಸಂಬಳ ನೀಡದೇ ಸುಳೇಭಾವಿ ಗ್ರಾಮ ಪಂಚಾಯತ ಪಿಡಿಒ ಶ್ರೀದೇವಿ ಹಿರೇಮಠ ಹಾಗೂ ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೇಕಾರರು ಅಷ್ಟೇ ಅಲ್ಲದೇ ರೈತ ಕುಟುಂಬಗಳು ಸಹ ಉದ್ಯೋಗ ಖಾತ್ರಿಯಡಿ ಕೆಲಸ ಮಾಡಿವೆ. ಆದರೆ, ಇತ್ತೀಚೆಗೆ ಸುರಿದ ಕುಂಭದ್ರೋಣ ಮಳೆಯಿಂದಾಗಿ ಅಪಾರ ಬೆಳೆ ಹಾನಿಯಾಗಿದೆ. ಲಾಕ್‌ಡೌನ್ ಹಾಗೂ ಪ್ರವಾಹದ ಪರಿಣಾಮದಿಂದ ಕೆಲಸ ಇಲ್ಲದೇ ನರೇಗಾ ಕೆಲಸಕ್ಕಾಗಿ ಅರ್ಜಿ ಹಾಕಿ ದುಡಿಯುತ್ತಿದ್ದಾರೆ. ಕಳೆದ ಆರೇಳು ತಿಂಗಳಿಂದ ಪಂಚಾಯತಿ ನಿಗದಿಪಡಿಸಿದ ಕೆಲಸ ಮಾಡುತ್ತಿದ್ದಾರೆ. ಆದರೆ, ಪಿಡಿಒ ಶ್ರೀದೇವಿ ಹಿರೇಮಠ ಬೇಜವಾಬ್ದಾರಿ ಹಾಗೂ ಸರ್ಕಾರದ ನಿರ್ಲಕ್ಷ್ಯದಿಂದ ತಮಗೆ ಬರಬೇಕಾದ ಹಣ ಬರುತ್ತಿಲ್ಲ ರೈತ ಕುಟುಂಬಗಳು ಸಹ ಅಳಲು ತೋಡಿಕೊಳ್ಳುತ್ತಿದ್ದಾರೆ.