ಚಿಕ್ಕೋಡಿ: ಕಳೆದ ಎರಡು ತಿಂಗಳಿಂದ ಬತ್ತಿ ಹೋದ ಕೃಷ್ಣಾ ನದಿಗೆ ನೀರು ಹರಿಸಲು ಒತ್ತಾಯಿಸಿ ಪ್ರತಿಭಟನೆಗಳು ದಿನದಿಂದ ದಿನಕ್ಕೆ ತಾರಕಕ್ಕೆ ಏರುತ್ತಿದ್ದು, ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಹೋರಾಟದ ಕಾವು ಹೆಚ್ಚುತ್ತ ಹೋಗುತ್ತಿದೆ. ಪಕ್ಷಾತೀತ ಮತ್ತು ಜಾತ್ಯಾತೀತ ಹೋರಾಟಕ್ಕೆ ಇಂದು ಮುನ್ನುಡಿ ಬರೆಯಲಾಯಿತು.
ಬತ್ತಿದ ಕೃಷ್ಣಾ ನದಿಗೆ ಮಹಾರಾಷ್ಟ್ರದ ಕೊಯ್ನಾ ಡ್ಯಾಂನಿಂದ ನೀರು ಹರಿಸುವಂತೆ ಮತ್ತು ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ 800ಕ್ಕೂ ಹೆಚ್ಚು ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆಗೆ ಶಾಸ್ವತ ಪರಿಹಾರ ಒದಗಿಸುವಂತೆ ಆಗ್ರಹಿಸಿ ಇದೇ ತಿಂಗಳ ಸೋಮವಾರ ಮೇ 20 ರಂದು ಅಥಣಿ ಬಂದ್ಗೆ ಕರೆ ಕೊಡಲಾಗಿದೆ. ಜಯಕರ್ನಾಟಕ, ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ, ಕರ್ನಾಟಕ ವಿಜಯ ಸೇನೆ, ಕರ್ನಾಟಕ ರಕ್ಷಣಾ ವೇದಿಕೆ, ಕಿಸಾನ್ ಸಂಘಟನೆ ಸೇರಿದಂತೆ ಹತ್ತಾರು ಸಂಘಟನೆಗಳು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿವೆ.
ಶನಿವಾರ ನಡೆದ ಸಾಂಕೇತಿಕ ಪ್ರತಿಭಟನೆಯಲ್ಲಿ ಮಾರುಕಟ್ಟೆ ಸೇರಿದಂತೆ ಹಲವು ಕಡೆ ತಮಟೆ ಬಾರಿಸಿ ವರ್ತಕರಿಗೆ ಮನವಿ ಮಾಡಿ ಸೋಮವಾರದ ಬಂದ್ಗೆ ಸಹಕರಿಸಲು ಕೋರಲಾಗಿದೆ.
ಈ ವೇಳೆ ಅಥಣಿ ಪತ್ರಕರ್ತರ ಸಂಘಟನೆ, ನ್ಯಾಯವಾದಿಗಳ ಸಂಘಟನೆ ಕುಡಿಯುವ ನೀರಿನ ಸಮಸ್ಯೆಯ ವ್ಯಾಪಕತೆಯನ್ನು ಅರಿತು ಪ್ರತಿಭಟನೆ ಮುಂಚೂಣಿ ವಹಿಸಿದ್ದು, ಪ್ರತಿಭಟನೆ ಕಾವು ತೀವ್ರ ಸ್ವರೂಪ ಪಡೆಯುವುದನ್ನು ಪ್ರತಿಬಿಂಬಿಸಿತು. ಅಲ್ಲದೆ ಅಥಣಿ ಪಟ್ಟಣದ ವರ್ತಕರು, ವ್ಯಾಪಾರಸ್ಥರು, ಬೀದಿ ವರ್ತಕರು, ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕ ಸಂಘಗಳು ಮತ್ತು ಕನ್ನಡಪರ ಸಂಘಟನೆಗಳು ಸೇರಿದಂತೆ ಒಟ್ಟು ಮೂವತ್ತಕ್ಕೂ ಹೆಚ್ಚು ಸಂಘಟನೆಗಳು ಬೀದಿಗೆ ಇಳಿಯಲಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಪ್ರತಿಭಟನೆ ಬಿಸಿ ಮುಟ್ಟಿಸಲು ಮುಂದಾಗಿರುವುದು ಕಂಡು ಬಂತು.