ಬೆಳಗಾವಿ: ಮರಾಠಿಗರು, ಲಿಂಗಾಯತರು, ಕುರುಬರು, ಜೈನರು, ದೇಶಿಯತೆ ಒಪ್ಪಿಕೊಂಡ ಮುಸ್ಲಿಂ ಬಾಂಧವರು ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಧ್ವಜ ಹಾರಿಸಬೇಕೆಂದು ತೀರ್ಮಾನ ಮಾಡಿದ್ದಾರೆ ಎಂದು ಕುಡಚಿ ಶಾಸಕ ಪಿ.ರಾಜೀವ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ಉತ್ತರ ಕರ್ನಾಟಕ ನೈಜ ಅಭಿವೃದ್ಧಿ ಆಗಬೇಕಾದರೆ, ಎಲ್ಲ ತರಹದ ಕೈಗಾರಿಕೆಗಳು ಹೆಚ್ಚಿನ ಪ್ರಮಾಣದಲ್ಲಿ ಬರಬೇಕು. ಅದಕ್ಕೆ ಬೇಕಾದ ಸಂಪನ್ಮೂಲಗಳಗಳ ಒದಗಿಸುವ ಕೆಲಸ ಮಾಡಬೇಕು. ಒಂದು ವೇಳೆ ಎಲ್ಲಿಯವರೆಗೆ ಕೈಗಾರಿಕೆಗಳು ಬರುವುದಿಲ್ಲವೋ ಅಲ್ಲಿಯವರೆಗೆ ಉತ್ತರ ಕರ್ನಾಟಕ ಅಭಿವೃದ್ಧಿ ಅಸಾಧ್ಯ. ಹೀಗಾಗಿ, ಜಿಲ್ಲಾ, ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಕೈಗಾರಿಕಾ ಸ್ಥಾಪನೆಗಳು ಮಾಡಬೇಕು ಎಂದರು.
ಛತ್ರಪತಿ ಶಿವಾಜಿ ಮಹಾರಾಜರ ಆಲೋಚನೆಯೇ ಬಿಜೆಪಿ ಅಜೆಂಡಾ
ಛತ್ರಪತಿ ಶಿವಾಜಿ ಮಹಾರಾಜರ ಆಲೋಚನೆಯೇ ಬಿಜೆಪಿ ಅಜೆಂಡಾ ಆಗಿದೆ. ರಾಷ್ಟ್ರ ಮೊದಲು ಆನಂತರದಲ್ಲಿ ಪಕ್ಷ ಮತ್ತು ರಾಜ್ಯ. ರಾಷ್ಟ್ರಕ್ಕಾಗಿ ನಾವು ಎಂತಹ ಪರಿಸ್ಥಿತಿಯಲ್ಲೂ ಕಟಿಬದ್ಧರಾಗಿ ನಿಲ್ತೇವೆ. ಅದಕ್ಕೆ ನಮ್ಮ ಪ್ರೇರಣೆಯೇ ಛತ್ರಪತಿ ಶಿವಾಜಿ ಮಹಾರಾಜರು. ಕೆಲವೊಬ್ಬರು ಪುಂಡಾಟಿಕೆಯಿಂದ ಹೇಳುವ ಹೇಳಿಕೆಗಳಿಗೆ ಯಾವುದೇ ಬೆಲೆ ಇಲ್ಲ. ನಿಜವಾದ ಭಾರತೀಯನಿಗೆ ಯಾವುದೇ ಜಾತಿಯೂ ಇಲ್ಲ ಎಂದು ತಿಳಿಸಿದರು.
ಪಾಲಿಕೆ ಚುನಾವಣೆಯಲ್ಲಿ ಗೆಲ್ಲಲು ಎಂಇಎಸ್ ಭಾಷಾ ಆಧಾರದ ಮೇಲೆ ವಿಷಬೀಜ ಬಿತ್ತುತ್ತಿದೆ. ಅಲ್ಲದೇ, ಛತ್ರಪತಿ ಶಿವಾಜಿ ಮಹಾರಾಜರ ತತ್ವಗಳನ್ನು ಮರೆತು ಬೇರೆಯವರೊಂದಿಗೆ ಕೈ ಜೋಡಿಸುತ್ತಿದ್ದಾರೆ ಎಂದು ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಟಾಂಗ್ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳಗಾವಿ ತ್ರೀವೆಣಿ ಸಂಗಮ ಸ್ಥಳವಾಗಿದ್ದು, ಬೆಳಗಾವಿ ಕರ್ನಾಟಕ ರಾಜ್ಯದ ಹೆಬ್ಬಾಗಿಲು. ಕಳೆದ ಇಪ್ಪತ್ತೈದು ವರ್ಷಗಳ ನಂತರ ಪಕ್ಷದ ಚಿಹ್ನೆ ಮೇಲೆ ನಡೆಯುತ್ತಿರುವ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಯ ಭಾಷೆ, ಜಾತಿ ಬಿಟ್ಟು ಅಭಿವೃದ್ಧಿಪರ ಅಜೆಂಡಾ ಇಟ್ಟುಕೊಂಡು ಜನರ ಬಳಿಗೆ ಹೋಗುತ್ತಿದ್ದೇವೆ ಎಂದರು.
ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬೆಳಗಾವಿಗೆ ನೀಡಿರುವ ಕೊಡುಗೆ ಅಪಾರವಾಗಿದೆ. ಜಿಲ್ಲೆಯಲ್ಲಿ ಸುವರ್ಣ ವಿಧಾನಸೌಧ, ಸ್ಮಾರ್ಟ್ ಸಿಟಿ ಯೋಜನೆ, 24+7 ನಿರಂತರ ಕುಡಿಯುವ ನೀರಿನ ಯೋಜನೆ, 2,800 ಕೋಟಿ ರೂ.ಗಳಲ್ಲಿ ರಿಂಗ್ರಸ್ತೆ ಕಾಮಗಾರಿ ಶೀಘ್ರದಲ್ಲೇ ಆರಂಭವಾಗಲಿದೆ. ಇದಕ್ಕಾಗಿ ಇತಿಹಾಸದಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ಪಾಲಿಕೆಗೆ 100 ಕೋಟಿ ರೂ. ವಿಶೇಷ ಅನುದಾನ ನೀಡಿದೆ.
ದಿ. ಕೇಂದ್ರ ಸಚಿವ ಸುರೇಶ ಅಂಗಡಿ ಶ್ರಮದಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ, ಬೌದ್ಧ ನಿರ್ಮಾಣ ಮಾಡಲಾಗಿದ್ದು ಇದೆಲ್ಲವನ್ನೂ ಮಹಾನಗರ ಜನತೆ ತುಲನಾತ್ಮಕವಾಗಿ ನೋಡಿಕೊಂಡು ಬಿಜೆಪಿಗೆ ಮತ ಹಾಕುತ್ತಾರೆ ಎಂದು ತಿಳಿಸಿದರು.
ಇದನ್ನೂ ಓದಿ: ಮೈಸೂರು ಗ್ಯಾಂಗ್ರೇಪ್ ಪ್ರಕರಣ: ಆರೋಪಿ ಮಗನ ಬಂಧನ, ತಾಯಿಯ ಕಣ್ಣೀರು