ಅಥಣಿ: ರಾಜ್ಯ ಮುಖ್ಯಮಂತ್ರಿ ಹಾಗೂ ರಾಷ್ಟ್ರೀಯ ವರಿಷ್ಠರು ನನಗೆ ಯಾವುದೇ ಮಂತ್ರಿ ಸ್ಥಾನ ನೀಡಿದರೂ ನಿಭಾಯಿಸಲು ಸಿದ್ಧನಿದ್ದೇನೆ ಎಂದು ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಹೇಳಿದ್ದಾರೆ.
ತಾಲೂಕಿನ ಕೃಷ್ಣಾ ನದಿ ಪ್ರವಾಹ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ನೆರೆ ಸಂತ್ರಸ್ತರ ಕಾಳಜಿ ಕೇಂದ್ರಗಳಿಗೆ ಭೇಟಿ ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿದರು.
ಸದ್ಯದಲ್ಲಿ ಸಚಿವ ಸಂಪುಟ ರಚನೆ ಆಗುವುದರಿಂದ ನನಗೆ ಯಾವುದೇ ಸ್ಥಾನಮಾನ ನೀಡಿದರೂ ನಿರ್ವಹಿಸಲು ಸಿದ್ಧನಿದ್ದೇನೆ. ರಾಜ್ಯ ಹಾಗೂ ರಾಷ್ಟ್ರೀಯ ವರಿಷ್ಠರು ನನಗೆ ಯಾವುದೇ ಸಚಿವ ಸ್ಥಾನ ನೀಡಿದರೂ ನಿಭಾಯಿಸುತ್ತೇನೆ. ಆದರೆ, ಸಚಿವ ಸ್ಥಾನಕ್ಕೆ ಯಾರ ಮುಂದೆಯೂ ಲಾಬಿ ಮಾಡಿಲ್ಲ. ನನಗೆ ಸಚಿವ ಸ್ಥಾನಕ್ಕಿಂತಲೂ ಅಥಣಿ ಅಭಿವೃದ್ಧಿ ಹೆಚ್ಚಾಗಿದೆ ಎಂದರು.
ಸದ್ಯ ಅಥಣಿ ತಾಲೂಕಿನಲ್ಲಿ ಕೃಷ್ಣಾ ನದಿ ಪ್ರವಾಹದಿಂದಾಗಿ ಸಾಕಷ್ಟು ಹಾನಿ ಸಂಭವಿಸಿದೆ. ಇದರಿಂದಾಗಿ ಶಾಶ್ವತ ಪರಿಹಾರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ, ತಾಲೂಕಿನ ಹಲವಾರು ಯೋಜನೆ ಬಗ್ಗೆ ಹಾಗೂ ನೆರೆ ಬಾಧಿತ ಗ್ರಾಮಗಳಿಗೆ ಶಾಶ್ವತವಾಗಿ ಪರಿಹಾರ ಕೇಳಿದ್ದೇನೆ. ಆದಷ್ಟೂ ಬೇಗನೆ ಅಥಣಿಗೆ ಬರುವುದಾಗಿ ಸಿಎಂ ಭರವಸೆ ನೀಡಿದ್ದಾರೆ ಎಂದು ಹೇಳಿದರು.