ಚಿಕ್ಕೋಡಿ (ಬೆಳಗಾವಿ): ನನ್ನ ಹತ್ತಿರವೂ ಪೆನ್ಡ್ರೈವ್ ಇದೆ. ಸಂದರ್ಭ ಬಂದಾಗ ನಾನು ಕೂಡ ಪೆನ್ ಡ್ರೈವ್ ಬಿಡುಗಡೆ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ಅಥಣಿ ಶಾಸಕ ಲಕ್ಷ್ಮಣ್ ಸವದಿ ತಿರುಗೇಟು ನೀಡಿದ್ದಾರೆ.
ಅಥಣಿ ತಾಲೂಕಿನ ಕೋಕಟನೂರು ಗ್ರಾಮದಲ್ಲಿ ಪಶು ವೈದ್ಯಕೀಯ ಮಹಾವಿದ್ಯಾಲಯ ಉದ್ಘಾಟನೆಯ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ರು. ಬಳಿಕ ಮಾಜಿ ಸಿಎಂ ಕುಮಾರಸ್ವಾಮಿ ಮಾಡಿರುವ ಭ್ರಷ್ಟಾಚಾರ ಆರೋಪಕ್ಕೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಹೆಚ್ಡಿಕೆ ಮಾತನ್ನು ನಾನು ಮಾಧ್ಯಮಗಳಲ್ಲಿ ನೋಡಿದ್ದೇನೆ. ತುಂಬಾ ಕಡೆ ಪೆನ್ ಡ್ರೈವ್ ಇದ್ದಾವೆ. ನನ್ನ ಹತ್ತಿರವೂ ಒಂದು ಪೆನ್ ಡ್ರೈವ್ ಇದೆ. ಕಾಲಾನುಸಾರ, ಸಂದರ್ಭಾನುಸಾರ ನಾನು ಕೂಡ ಪೆನ್ ಡ್ರೈವ್ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದರು.
ನಾನು ಕೂಡ ಪೆನ್ಡ್ರೈವ್ ಬಿಡುಗಡೆ ಮಾಡುತ್ತೇನೆ : ಕಾಂಗ್ರೆಸ್ ಸರ್ಕಾರದಲ್ಲಿ ಯಾವುದೇ ಹಗರಣಗಳು, ಭ್ರಷ್ಟಾಚಾರಗಳು ನಡೆದಿಲ್ಲ. ಸಹಜವಾಗಿ ವಿರೋಧ ಪಕ್ಷದಲ್ಲಿ ಇದ್ದೇವೆ ಎಂಬುದನ್ನು ತೋರಿಸಲು ಹಾಗೂ ಸದಾ ಸುದ್ದಿಯಲ್ಲಿರಲು ಕುಮಾರಸ್ವಾಮಿ ಈ ರೀತಿ ಮಾತನಾಡುತ್ತಾರೆ. ವಿರೋಧ ಪಕ್ಷ ಇದ್ದು ಇಲ್ಲದಂತಾಗಿದೆ. ನಾವು ಅವರ ಮಾತನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು. ನನ್ನ ಹತ್ತಿರ ಪೆನ್ ಡ್ರೈವ್ ಇದ್ದು, ಸಂದರ್ಭಕ್ಕಾಗಿ ಕಾಯುತ್ತಾ ಇದ್ದೇನೆ, ಸಂದರ್ಭ ಬಂದರೆ ಬಿಡುಗಡೆ ಮಾಡಿದಾಗ ಪೆನ್ಡ್ರೈವ್ನಲ್ಲಿ ಏನಿದೆ ಎಂಬುದು ಎಲ್ಲರಿಗೂ ಗೊತ್ತಾಗುತ್ತದೆ ಎಂದರು.
ರಾಹುಲ್ ಗಾಂಧಿ ಅನರ್ಹತೆ ವಾಪಸ್.. ಪ್ರಜಾಪ್ರಭುತ್ವಕ್ಕೆ ಜಯ ಎಂದ ಸವದಿ : ಕಾಂಗ್ರೆಸ್ ರಾಹುಲ್ ಗಾಂಧಿ ಅವರಿಗೆ ವಿಧಿಸಲಾಗಿದ್ದ ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದ ಬೆನ್ನಲ್ಲೇ ಇಂದು ಲೋಕಸಭೆ ಸದಸ್ಯತ್ವ ಅನರ್ಹತೆಯನ್ನು ವಾಪಸ್ ಪಡೆಯಲಾಗಿದೆ. ಇದು ಸತ್ಯಕ್ಕೆ ಸಂದ ಜಯ. ಪ್ರಜಾಪ್ರಭುತ್ವವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ ಎಂದು ಲಕ್ಷ್ಮಣ ಸವದಿ ಬಣ್ಣಿಸಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಟೀಕೆ ಟಿಪ್ಪಣಿ ಸಹಜವಾಗಿ ಇರುವಂತಹದು. ಟೀಕೆ ಮಾಡಿರುವುದನ್ನು ದೊಡ್ಡ ವಿಷಯ ಮಾಡಿಕೊಂಡು ಗುಜರಾತ್ ರಾಜ್ಯದಲ್ಲಿ ಮಾನಹಾನಿ ಕೇಸ್ ಹಾಕಲಾಗಿತ್ತು. ಅಲ್ಲಿ ನಡೆದ ವಿಚಾರಣೆಯಲ್ಲಿ ಎರಡು ತೀರ್ಪುಗಳು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧವಾಗಿ ಬಂದಿತ್ತು. ಆದರೆ ಸುಪ್ರೀಂ ಕೋರ್ಟ್ ಇದಕ್ಕೆ ತಡೆ ನೀಡಿದೆ. ಯಾವತ್ತೂ ಸತ್ಯಕ್ಕೆ ಜಯ ಸಿಗುತ್ತದೆ ಎಂದು ಸುಪ್ರೀಂ ಕೋರ್ಟ್ ಸಾಬೀತು ಪಡಿಸಿದೆ ಎಂದು ಹೇಳಿದರು.
ಇದನ್ನೂ ಓದಿ : ಲಂಚದ ಆರೋಪಕ್ಕೆ ಕೃಷಿ ಸಚಿವ ಚಲುವರಾಯಸ್ವಾಮಿ ಪ್ರತಿಕ್ರಿಯೆ