ಚಿಕ್ಕೋಡಿ(ಬೆಳಗಾವಿ): "ನನಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನದ ನೀಡುತ್ತಾರೆಂಬ ವಿಚಾರ ಊಹಾಪೋಹ ಅಷ್ಟೇ. ಈ ಬಗ್ಗೆ ನನಗೆ ಮಾಹಿತಿಯೂ ಇಲ್ಲ" ಎಂದು ಅಥಣಿ ಶಾಸಕ ಲಕ್ಷ್ಮಣ್ ಸವದಿ ಹೇಳಿದರು. ಅಥಣಿ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಇದೆಲ್ಲಾ ಮಾಧ್ಯಮಗಳಲ್ಲಿ ಮಾತ್ರ ಚರ್ಚೆಯಾಗುತ್ತಿದೆ. ನಾನು ತಾಲೂಕಿನ ಅಭಿವೃದ್ಧಿ ವಿಚಾರವಾಗಿ ಸಿಎಂ ಮತ್ತು ಡಿಸಿಎಂ ಭೇಟಿಗೆ ಹೋಗಿದ್ದೆ. ಅವರೊಂದಿಗೆ ಯಾವುದೇ ರಾಜಕೀಯ ಚರ್ಚೆ ಮಾಡಿಲ್ಲ" ಎಂದರು.
"ಪದಾಧಿಕಾರಿಗಳ ಪುನರ್‌ರಚನೆಯನ್ನು ಕೇಂದ್ರದ ವರಿಷ್ಠರು ಹಾಗೂ ರಾಜ್ಯಾಧ್ಯಕ್ಷರು ಸೇರಿ ಮಾಡುವ ಪ್ರಕ್ರಿಯೆ. ಇವತ್ತಿನವರೆಗೂ ಈ ಕುರಿತು ನನ್ನೆದುರಿಗೆ ಯಾರೂ ಚರ್ಚೆ ಮಾಡಿಲ್ಲ" ಎಂದು ಹೇಳಿದರು. ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಬೆಳಗಾವಿಗೆ ಆಗಮಿಸಿದ್ದಾಗ ಶಾಸಕರು ಮತ್ತು ಸಚಿವರು ಅವರೊಂದಿಗೆ ಕಾಣಿಸಿಕೊಳ್ಳದ ವಿಚಾರವಾಗಿ ಮಾತನಾಡಿ, "ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು. ಅವರು ಹುಕ್ಕೇರಿ ಧಾರ್ಮಿಕ ಕಾರ್ಯಕ್ರಮಕ್ಕೆ ಬಂದಿದ್ದರು. ಬೆಳಗಾವಿಗೆ ಬರುತ್ತಿರುವ ಕುರಿತು ಶಾಸಕರಿಗೆ ಮತ್ತು ಮಂತ್ರಿಗಳಿಗೆ ಮಾಹಿತಿ ಇರಲಿಲ್ಲ. ಇದರಿಂದ ಕೆಲವು ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಬ್ಯುಸಿಯಾಗಿದ್ದರು" ಎಂದು ಹೇಳಿದರು.
"ನಾನು ಕೂಡ ಬೆಂಗಳೂರಿನಲ್ಲಿ ಬೇರೆ ಕೆಲಸದ ನಿಮಿತ್ತ ಅಲ್ಲೇ ಉಳಿದಿದ್ದೆ. ಡಿ.ಕೆ.ಶಿವಕುಮಾರ್ ಅವರು ಭಾಗವಹಿಸಿದ್ದು ಸರ್ಕಾರಿ ಕಾರ್ಯಕ್ರಮವಲ್ಲ. ಈ ವಿಚಾರವನ್ನು ಅಪಾರ್ಥ ಮಾಡಿಕೊಳ್ಳಬಾರದು. ಹುಕ್ಕೇರಿ ಶ್ರೀಗಳು ದಸರಾ ಹಬ್ಬಕ್ಕೆ ಅವರನ್ನು ಆಹ್ವಾನಿಸಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಗಳ ಸ್ಥಾನ ವಹಿಸಿದ್ದರು. ಇಲ್ಲಿ ಅವರ ಸ್ವಾಗತಕ್ಕೆ ಅವರು ಹೋಗಿಲ್ಲ, ಇವರು ಹೋಗಿಲ್ಲ ಎಂಬ ಚರ್ಚೆ ಅನಾವಶ್ಯಕ" ಎಂದರು.
ಲೋಕಸಭಾ ಚುನಾವಣೆ ಹೊತ್ತಿಗೆ ಕಾಂಗ್ರೆಸ್ ಸರ್ಕಾರ ಉರುಳುತ್ತದೆ ಎಂಬ ಮಾಜಿ ಸಚಿವ ಈಶ್ವರಪ್ಪ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, "ಈಶ್ವರಪ್ಪನವರು ಇಂತಹ ಹೇಳಿಕೆ ನೀಡುವುದು ಹೊಸದೇನಲ್ಲ. ಮೊದಲಿನಿಂದಲೂ ಈ ರೀತಿ ಹೇಳುತ್ತಿದ್ದಾರೆ. ಈ ರೀತಿ ಹೇಳಿ ಜನರನ್ನು ಬೇರೆ ಕಡೆ ಸೆಳೆಯುತ್ತಾರೆ, ಈ ಸರ್ಕಾರ ಐದು ವರ್ಷ ಸುಭದ್ರವಾಗಿ ಇರುತ್ತದೆ. ಐದು ವರ್ಷ ಸರ್ಕಾರ ಏನು ಆಗುವುದಿಲ್ಲ. ಐದು ಪ್ಲಸ್ ಐದು ವರ್ಷಗಳ ಕಾಲ ಸರ್ಕಾರ ಗಟ್ಟಿಯಾಗಿ ಇರುತ್ತದೆ. ಇನ್ನು ಹತ್ತು ವರ್ಷಗಳ ಕಾಲ ಬಿಜೆಪಿ ಭದ್ರವಾಗಿ ವಿರೋಧ ಪಕ್ಷದಲ್ಲಿರುತ್ತದೆ" ಎಂದು ತಿರುಗೇಟು ನೀಡಿದರು.
ಬೆಳಗಾವಿ ರಾಜಕಾರಣ ವರಿಷ್ಠರಿಗೆ ತಲೆನೋವಾಗಿರುವ ವಿಚಾರವಾಗಿ ಮಾತನಾಡಿ, "ಯಾವುದೇ ತಲೆನೋವು, ಮೈ ನೋವು ಇಲ್ಲ. ಸುಮ್ಮನೆ ಅವು ಸೃಷ್ಟಿಯಾಗಿವೆ. ಬೆಳಗಾವಿ ಕಾಂಗ್ರೆಸ್‌ನಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನಾವು ಎಲ್ಲರೂ ಒಂದಾಗಿದ್ದೇವೆ, ಒಟ್ಟಾಗಿ ಇರುತ್ತೇವೆ. ಒಳ್ಳೆಯ ಕೆಲಸಗಳನ್ನು ಮಾಡೋದಕ್ಕೆ ಚಿಂತನೆ ಮಾಡಿದ್ದೇವೆ, ಒಟ್ಟಾಗಿ ನಾವು ಕೆಲಸಗಳನ್ನು ಮಾಡುತ್ತೇವೆ" ಎಂದು ಹೇಳಿದರು.
ಇದನ್ನೂ ಓದಿ: ಕುಂದಾನಗರಿಯಲ್ಲಿ ದಾಂಡಿಯಾ ಸಂಭ್ರಮ: ಕುಣಿದು ಕುಪ್ಪಳಿಸಿದ ಯುವಕ - ಯುವತಿಯರು