ಬೆಳಗಾವಿ: ತಾಲೂಕಿನ ಮಾವಿನಕಟ್ಟಿ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಗುದ್ದಲಿ ಪೂಜೆ ನೆರವೇರಿಸಿದರು. ಇದೇ ವೇಳೆ ಅವರು ಮಾಜಿ ನೀರಾವರಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಗುದ್ದಲಿ ಪೂಜೆ ಬಳಿಕ ಮಾತನಾಡಿದ ಅವರು, ನಾಲ್ಕೂವರೆ ಕೋಟಿ ರೂಪಾಯಿಯ ಪ್ಯಾಕೇಜ್ ಇದು. ಎರಡು ವರ್ಷಗಳ ಹಿಂದೆಯೇ ನಾಲ್ಕೂವರೆ ಕೋಟಿ ರೂಪಾಯಿ ಟೆಂಡರ್ ಆಗಿ ವರ್ಕ್ ಆರ್ಡರ್ ಆಗಿತ್ತು. ಆದರೆ ದುರ್ದೈವದಿಂದ ಮೈತ್ರಿ ಸರ್ಕಾರ ಪತನವಾಯಿತು. ಬಳಿಕ ರಮೇಶ್ ಜಾರಕಿಹೊಳಿ ನೀರಾವರಿ ಸಚಿವರಾದರು. ರಮೇಶ್ ಜಾರಕಿಹೊಳಿ ನೀರಾವರಿ ಸಚಿವರಾದ ಆದ ತಕ್ಷಣವೇ ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ಮಂಜೂರಾದ ಎಲ್ಲ ಅನುದಾನವನ್ನು ತಡೆಹಿಡಿದರು ಇದಕ್ಕೆ ಇಂಜಿನಿಯರ್ ಸಾಕ್ಷಿ ಎಂದು ಹೇಳಿದರು.
ಆದರೆ ಇಂಜಿನಿಯರ್ಗಳು ಸರ್ಕಾರಿ ನೌಕರರಾಗಿರುವ ಕಾರಣಕ್ಕೆ ಮಾತನಾಡಲು ಬರುವುದಿಲ್ಲ. 15 ದಿನಗಳ ಹಿಂದೆಯೇ ಸಿಎಂ ಬಸವರಾಜ ಬೊಮ್ಮಾಯಿ ಸಾಹೇಬ್ರಿಗೆ ಮನವಿ ಮಾಡಿಕೊಂಡ ಮೇಲೆ ನಮಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಅದಕ್ಕಾಗಿ ಈ ರಸ್ತೆ ಮಾಡುತ್ತಿದ್ದೇವೆ. ಮಾವಿನಕಟ್ಟಿ ಗ್ರಾಮದ ಮಗಳಾಗಿ ನಾನು ಹೇಳಿದ ಕೆಲಸ ಮಾಡಿದ್ದೇನೆ ಎಂದರು.
ಒಮ್ಮೊಮ್ಮೆ ಸೂರ್ಯನಿಗೂ ಗ್ರಹಣ ಹಿಡಿಯುತ್ತೆ, ಚಂದ್ರನಿಗೂ ಗ್ರಹಣ ಹಿಡಿಯುತ್ತೆ. ಇನ್ನು ಲಕ್ಷ್ಮೀ ಹೆಬ್ಬಾಳ್ಕರ್ ಯಾವ ಗಿಡದ ತಪ್ಪಲ?. ಜೀವನದಲ್ಲಿ ರಾಕ್ಷಸರು ಬರ್ತಿರ್ತಾರೆ, ಬಂದು ಹೋಗಿರ್ತಾರೆ. ಆದರೆ ಸೂರ್ಯ ಸೂರ್ಯನೇ, ಚಂದ್ರ ಚಂದ್ರನೇ. ನಿಮ್ಮ ಆಶೀರ್ವಾದ ಇರುವ ತನಕ ನಾನು ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.