ಬೆಳಗಾವಿ: ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಶಾಸಕ ಲಕ್ಷ್ಮೀ ಹೆಬ್ಬಾಳ್ಕರ್ ಕಿಡಿಕಾರಿದ್ದಾರೆ. ಜನಸಾಮಾನ್ಯರ ಬೆವರಿನ ದುಡ್ಡನ್ನು ವಾಪಸ್ ಪಡೆಯಲು ಬಿಜೆಪಿ ಇಂಧನ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ಮೂರು ದಿನಗಳ ಹಿಂದೆ ಅಡುಗೆ ಅನಿಲದ ಬೆಲೆ 20 ರೂ. ಏರಿಕೆ ಆಗಿದೆ. ಕಳೆದ ಒಂದು ವರ್ಷದಲ್ಲಿ ದಿನಸಿ ಸಾಮಗ್ರಿಗಳ ಬೆಲೆ ಗಗನಕ್ಕೇರಿಸಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.
ಕೋವಿಡ್ ಸಂದರ್ಭದಲ್ಲಿ ಕೇಂದ್ರ ಸರ್ಕಾರ ದೇಶದ ಜನರಿಗೆ ಇಪ್ಪತ್ತು ಲಕ್ಷ ಕೋಟಿ ರೂಪಾಯಿ ಕೊರೊನಾ ಪ್ಯಾಕೇಜ್ ಘೋಷಣೆ ಮಾಡಿದೆ. ಆದರೆ ಅದನ್ನು ಪೂರ್ತಿ ಮಾಡಲಿಲ್ಲ. ಒಂದೆರಡು ಸಾವಿರ ಕೋಟಿ ಹಣವನ್ನು ಜನರಿಗೆ ಕೊಟ್ಟಿದೆ. ಅದರ ಹೊರೆ ಜನರ ಮೇಲೆಯೇ ಹಾಕಿ ಅವರ ಬೆವರಿನ ದುಡ್ಡನ್ನು ವಾಪಸ್ ಪಡೆಯಲು ಬೆಲೆ ಏರಿಕೆ ಮಾಡುತ್ತಿದೆ. ಹೀಗಾಗಿ ಜನರ ಸಂಕಷ್ಟ ದೂರ ಮಾಡುವ ಸಲುವಾಗಿ ಕಾಂಗ್ರೆಸ್ ಪಕ್ಷದಿಂದ ಬೀದಿಗಿಳಿದು ಹೋರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಕ್ರೆಡಿಟ್ ರಾಜಕೀಯ ಕೈಗೆ ಅನಿರ್ವಾವಿಲ್ಲ:
ಕ್ರೆಡಿಟ್ ಪಾಲಿಟಿಕ್ಸ್ ಕಾಂಗ್ರೆಸ್ಗೆ ಬರೋದಿಲ್ಲ. ಕಾಂಗ್ರೆಸ್ನ ಎಲ್ಲ ಕಾರ್ಯಕ್ರಮವನ್ನು ವಿರೋಧ ಮಾಡೋರು ಬಿಜೆಪಿಗರು. ಅವುಗಳನ್ನು ತಮ್ಮ ಯೋಜನೆಗಳು ಎಂದು ಪ್ರಚಾರ ಪಡೆದುಕೊಂಡರು. ಕ್ರೆಡಿಟ್ ಪಾಲಿಟಿಕ್ಸ್ ಕಾಂಗ್ರೆಸ್ಗೆ ಅನಿವಾರ್ಯ ಇಲ್ಲ. ನಮ್ಮ ವಿರುದ್ಧ ಆರೋಪ ಮಾಡುವವರ ಬಗ್ಗೆ ಮಾತನಾಡಲು ನಮಗೆ ಮನಸ್ಸು ಇಲ್ಲವೆಂದು ಸಂಸದೆ ಮಂಗಳಾ ಅಂಗಡಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ನಡುವೆ ಕ್ರೆಡಿಟ್ ಪಾಲಿಟಿಕ್ಸ್ ಶುರು ಆಗಿದೆಯಾ ಎಂಬ ಆರೋಪಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್ ಈ ರೀತಿ ಪ್ರತಿಕ್ರಿಯೆ ನೀಡಿದರು.
ಇದನ್ನೂ ಓದಿ: COVID ಹೆಸರಲ್ಲಿ ಭಾರಿ ಮೋಸ.. ಹುಬ್ಬಳ್ಳಿಯಲ್ಲಿ ವೃದ್ಧೆಗೆ 15ಲಕ್ಷ ರೂಪಾಯಿ ವಂಚನೆ!