ಚಿಕ್ಕೋಡಿ : ಜನರ ಹಿತದೃಷ್ಟಿಯಿಂದ ಹಾಗೂ ಕ್ಷೇತ್ರದ ರೈತರ ಕೃಷಿ ಚಟುವಟಿಕೆಗಳ ಅನುಕೂಲಕ್ಕಾಗಿ ಕೆರೆ ನಿರ್ಮಿಸಿ, ಅವುಗಳನ್ನು ಭರ್ತಿ ಮಾಡಿರುವ ಶಾಸಕ ಉಮೇಶ ಕತ್ತಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಬೆಳಗಾವಿ ಜಿಲ್ಲೆ ಹುಕ್ಕೇರಿ ಕ್ಷೇತ್ರವು ಹಸಿರಿನಿಂದ ಕಂಗೊಳಿಸುತ್ತಿದೆ. ಇದಕ್ಕೆ ಪ್ರಮುಖ ಕಾರಣ ಕೆರೆಗಳನ್ನು ನಿರ್ಮಿಸಿರುವುದಾಗಿದೆ. ಬರಡಾಗಿದ್ದ ಭೂಮಿಗೆ ಹೊಸ ಜೀವ ಕಳೆ ತುಂಬಿದೆ ಎಂದು ರೈತರು ಹರ್ಷ ವ್ಯಕ್ತಪಡಿಸಿದರು.
ಸದ್ಯ 30 ಗ್ರಾಮಗಳ ಕೆರೆಗಳ ಅಭಿವೃದ್ಧಿ ಕಾರ್ಯಕ್ಕೆ ಮುನ್ನುಡಿ ಬರೆದು ಯಶಸ್ವಿಯಾಗಿದ್ದಾರೆ. ದೂರದ ಹಿರಣ್ಯಕೇಶಿ ನದಿಯಿಂದ ಪೈಪ್ಲೈನ್ ಮೂಲಕ ಕೆರೆಗಳು ಭರ್ತಿಯಾಗಿವೆ. ಮಳೆ ನೆಚ್ಚಿಕೊಂಡಿದ್ದ ಸಾವಿರಾರು ಎಕರೆ ಭೂಮಿಯಲ್ಲಿ ಸದ್ಯ ಕೃಷಿ ಚಟುವಟಿಗಳು ಗರಿಗೆದರಿವೆ. ರೈತರಿಗೆ ಕೆರೆ ತುಂಬಿಸುವ ಯೋಜನೆ ಒಂದು ವರದಾನವಾಗಿ ಪರಿಣಮಿಸಿದೆ.
ಕೆರೆಗಳಲ್ಲಿ ಸತತ ನೀರು ಹರಿಸುವುದರಿಂದ ಅಂತರ್ಜಲ ಮಟ್ಟದಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಾಣಲು ಸಾಧ್ಯವಾಗುತ್ತದೆ. ಸಣ್ಣ ನೀರಾವರಿ ಇಲಾಖೆಯಿಂದ ಕಮತನೂರ ಕೆರೆ ತುಂಬಿಸಲು ಸುಪ್ರೀಂಕೋರ್ಟ್‌ನಿಂದ ಒಪ್ಪಿಗೆ ತೆಗೆದುಕೊಳ್ಳಲಾಯಿತು. ಒಟ್ಟು 10 ಕೆರೆಗಳನ್ನು ತುಂಬಿಸಲಾಗಿದೆ ಎಂದು ಸಣ್ಣ ನೀರಾವರಿ ಇಲಾಖೆ ಅಭಿಯಂತರ ಸಂಜಯ್‌ಕುಮಾರ್ ಮಾಳಗಿ ಹೇಳಿದರು.