ಬೆಳಗಾವಿ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಹೊಗಳಲು ಎಂದೇ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಕರ್ನಾಟಕಕ್ಕೆ ಬರೋದು ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವ್ಯಂಗ್ಯವಾಡಿದ್ದಾರೆ.
ಬೆಳಗಾವಿಯ ಬೈಲಹೊಂಗಲ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಶೋಕಾಸ್ ನೋಟಿಸ್ ನೀಡಿದ್ದೆ ಡೂಪ್ಲಿಕೇಟ್, ಅವರು ಉಚ್ಚಾಟನೆ ಮಾಡಲಿ ನೋಡೋಣ. ಉಪಚುನಾವಣೆ ಪ್ರಚಾರಕ್ಕೆ ಅರುಣ್ ಸಿಂಗ್ ನಮ್ಮನ್ನೇನೂ ಕರೆದಿಲ್ಲ. ಆದರೆ, ಪಕ್ಷದ ಕಾರ್ಯಕರ್ತನಾಗಿ ಪ್ರಚಾರ ಮಾಡಲು ಅರುಣ್ ಸಿಂಗ್ ಅವರನ್ನು ಕೇಳಬೇಕು ಎಂದೇನಿಲ್ಲ ಎಂದರು.
ಅರುಣ್ ಸಿಂಗ್ ಕರ್ನಾಟಕಕ್ಕೆ ಬರೋದೇ ಯಡಿಯೂರಪ್ಪ ಅವರನ್ನು ಹೊಗಳಲು. ಅರುಣ್ ಸಿಂಗ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಬೇಕೆ ಹೊರತು ಯಡಿಯೂರಪ್ಪ, ವಿಜಯೇಂದ್ರನ ಪ್ರಧಾನ ಕಾರ್ಯದರ್ಶಿ ಆಗಿ ಅಲ್ಲ. ಪಕ್ಷದಲ್ಲಿ ಭ್ರಷ್ಟಾಚಾರ ಕುಟುಂಬಶಾಹಿ ಆಡಳಿತ ನಡೆದಿದೆ, ಅದರ ಬಗ್ಗೆ ಕ್ರಮ ತೆಗೆದುಕೊಳ್ಳಲಿ. ಅದನ್ನು ಬಿಟ್ಟು ನನ್ನ ವಿರುದ್ಧವೇನು ಇವರು ಕ್ರಮ ತೆಗೆದುಕೊಳ್ಳುವುದು ಎಂದು ಪ್ರಶ್ನಿಸಿದರು.
ನಾನು ಅರುಣ್ ಸಿಂಗ್ ಹೇಳಿಕೆಗೆ ಮಹತ್ವ ಕೊಡಲ್ಲ. ಅವರು ಏನ್ ಕ್ರಮ ತಗೆದುಕೊಳ್ಳುತ್ತಾರೆ ನೋಡೋಣ. ಬಹಳಷ್ಟು ರಾಜಕೀಯ ನಾಯಕರಿದ್ದಾರೆ. ಕ್ರಮ ತೆಗೆದುಕೊಳ್ಳುವ ಅಧಿಕಾರ ಇವರೊಬ್ಬರಿಗೆ ಇಲ್ಲ. ಏನು ಕ್ರಮ ತಗೆದುಕೊಳ್ಳುತ್ತಾರೆ ನೋಡೋಣ ಎಂದು ತಿರುಗೇಟು ನೀಡಿದರು.
ಡಿಕೆಶಿಗೆ ಯತ್ನಾಳ್ ತಿರುಗೇಟು
ಸರ್ಕಾರ ನಡೆಸುವ ಅನುಭವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗಿಲ್ಲ ಎಂಬ ಡಿಕೆಶಿ ಹೇಳಿಕೆಗೆ ಶಾಸಕ ಯತ್ನಾಳ ತಿರುಗೇಟು ನೀಡಿದರು. ಡಿ.ಕೆ.ಶಿವಕುಮಾರ್‌ಗೆ ಯಾವುದರಲ್ಲಿ ಅನುಭವ ಇದೆ? ಜೈಲಿಗೆ ಹೋಗುವುದು ಬಿಟ್ರೆ ಅವರಿಗೆ ಬೇರೆ ಅನುಭವ ಇಲ್ಲ. ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿಗೆ ಆಶೀರ್ವಾದ ಮಾಡುವಂತೆ ನಮ್ಮ ಸಮಾಜದವರನ್ನು ಕೇಳಿದ್ದೇನೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಆಶೀರ್ವಾದ ಮಾಡಿ ಎಂದು ಕೋರುತ್ತೇನೆ ಎಂದರು.